ಉಡುಪಿ/ವಿಜಯಪುರ : ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ (59) ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ರಾಜು ತಾಳಿಕೋಟೆ ಚಿತ್ರಿಕರಣದಲ್ಲಿ ಭಾಗಿಯಾಗಿದ್ದರು.
ನೆನ್ನೆ ಚಿತ್ರೀಕರಣ ಮುಗಿಸಿ ರಾತ್ರಿ ವೇಳೆಗೆ ವಿಶ್ರಾಂತಿಯಲ್ಲಿದ್ದಾಗ ಉಸಿರಾಟದ ಸಮಸ್ಯೆಯಾಗಿದೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆ ತರಲಾಗಿತ್ತು. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟೆಯವರು ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.
ಅನಾರೋಗ್ಯ ಕಾರಣದಿಂದಾಗಿ ರಾಜು ತಾಳಿಕೋಟೆ ನಾಟಕ ಹಾಗೂ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ರಾಜು ತಾಳಿಕೋಟೆಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.















