ಖ್ಯಾತ ಸಿನಿಮಾಗಳ ನಿರ್ದೇಶಕ ಕಲಾತಪಸ್ವಿ ಕಾಸಿನಧುನಿ ವಿಶ್ವನಾಥ್ ಅವರು ಗುರುವಾರ ಮಧ್ಯರಾತ್ರಿ ಹೈದರಾಬಾದ್’ನಲ್ಲಿ ನಿಧನರಾಗಿದ್ದಾರೆ.
92 ವರ್ಷದ ಅವರು, ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.
ಅವರ ಎದೆ ಬಡಿತದ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಬಳಿಕ ಅವರ ಮೃತದೇಹವನ್ನು ಜುಬಿಲಿ ಹಿಲ್ಸ್’ನಲ್ಲಿರುವ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.
1930 ಫೆಬ್ರವರಿ 19 ರಂದು ಗುಂಟೂರಿನಲ್ಲಿ ಜನಿಸಿದ್ದ ಅವರು, ಕಲಾತಪಸ್ವಿ ಎಂದೇ ಪ್ರಖ್ಯಾತರಾಗಿದ್ದರು. ತೆಲುಗು, ತಮಿಳು ಹಾಗೂ ಹಿಂದಿ ಸೇರಿ 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಶಂಕರಾಭರಣಂ, ಸಿರಿಸಿರಿ ಮುವ್ವಾ, ಸಪ್ತಪದಿ, ಶುಭಲೇಖ, ಸಾಗರಸಂಗಮಂ, ಸ್ವಾತಿಮುತ್ಯಂ, ಸೂತ್ರಧಾರುಲು, ಶೃತಿಲಯಲು, ಶುಭಸಂಕಲ್ಪಂ, ಆಪ್ತಬಂಧವುಡು, ಸ್ವಯಂ ಕೃಷಿ, ಸ್ವರ್ಣ ಕಮಲಂ– ಇವು ಅವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ಮೋಹನ್ ರೆಡ್ಡಿ, ವಿಶ್ವನಾಥ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.