ಮನೆ ರಾಜ್ಯ ಕೊರೋನಾದಿಂದ ತಮಿಳಿನ ಖ್ಯಾತ ನಟ ವಿಜಯಕಾಂತ್ ನಿಧನ.

ಕೊರೋನಾದಿಂದ ತಮಿಳಿನ ಖ್ಯಾತ ನಟ ವಿಜಯಕಾಂತ್ ನಿಧನ.

0

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಸಂಸ್ಥಾಪಕ ವಿಜಯಕಾಂತ್ (71) ಗುರುವಾರ ಬೆಳಗಿನ ಜಾವ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ನಟ ವಿಜಯಕಾಂತ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದರು ಎನ್ನಲಾಗಿದೆ.  ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದರು. ಈಗ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿಜಯಕಾಂತ್ ಅವರು 1952ರಲ್ಲಿ ಮದುರೈನಲ್ಲಿ ಜನಿಸಿದರು. ಅವರು 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದರು. 1979ರಲ್ಲಿ ತೆರೆಕಂಡ ಇನಿಕ್ಕುಮ್ ಇಳಮೈ ಸಿನಿಮಾದ ಮೂಲಕ ಅವರು ಸಿನಿಮಾರಂಗಕ್ಕೆ ಕಾಲಿಟ್ಟರು. ಬಳಿಕ  150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ವಿಜಯ್ ಕಾಂತ್ ಅವರು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಮತ್ತು ಅವರ ಇಬ್ಬರು ಪುತ್ರರನ್ನು ಅಗಲಿದ್ದಾರೆ.ಕಳೆದ ಕೆಲ ವರ್ಷಗಳಿಂದ ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ್ ಕಾಂತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದರು. ಅನಾರೋಗ್ಯದಿಂದ ರಾಜಕಾರಣದಲ್ಲಿ ಕೂಡ ಸಕ್ರಿಯರಾಗಿರಲು ಸಾಧ್ಯವಾಗುತ್ತಿರಲಿಲ್ಲ. ಮೂರು ವಾರಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಡಿಸೆಂಬರ್ 18 ರಂದು ಡಿಎಂಡಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು ಕೊನಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರ ಆರೋಗ್ಯ ವೈಫಲ್ಯದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅವರ ಪತ್ನಿ ಪ್ರೇಮಲತಾ ಅವರಿಗೆ ಪಕ್ಷದ ಲಾಠಿ ಹಸ್ತಾಂತರಿಸಲಾಯಿತು.

ನಾರಾಯಣನ್ ವಿಜಯರಾಜ್ ಅಲಗರಸ್ವಾಮಿ (25 ಆಗಸ್ಟ್ 1952 – 28 ಡಿಸೆಂಬರ್ 2023) ವಿಜಯಕಾಂತ್ ಎಂಬ ರಂಗನಾಮದಿಂದ ಚಿರಪರಿಚಿತರಾಗಿದ್ದರು, ಅವರು ತಮಿಳು ಚಿತ್ರರಂಗದಲ್ಲಿ ಖ್ಯಾತ ನಟರಾಗಿದ್ದು, ರಾಜಕಾರಣಿಯೂ ಹೌದು.

ಸೆಪ್ಟೆಂಬರ್ 14, 2005 ರಂದು, ವಿಜಯಕಾಂತ್ ಅವರು ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು, ಅದು ದೇಸಿಯ ಮುರ್ಪೊಕ್ಕು ದ್ರಾವಿಡರ್ ಕಳಗಂ. 2006 ರ ವಿಧಾನಸಭಾ ಚುನಾವಣೆಯಲ್ಲಿ, ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಎಲ್ಲಾ 234 ಸ್ಥಾನಗಳಲ್ಲಿ ಸ್ಪರ್ಧಿಸಿ ಶೇಕಡಾ 8.38 ಮತಗಳೊಂದಿಗೆ ಕೇವಲ ಒಂದು ಸ್ಥಾನವನ್ನು ಗಳಿಸಿತ್ತು. ವಿರುಧಾಚಲಂ ಕ್ಷೇತ್ರದಿಂದ ವಿಜಯಕಾಂತ್ ಮಾತ್ರ ಗೆದ್ದು, ಉಳಿದೆಲ್ಲಾ ಅಭ್ಯರ್ಥಿಗಳು ಸೋತಿದ್ದರು. 2011ರ ಅಸೆಂಬ್ಲಿ ಚುನಾವಣೆಯಲ್ಲಿ ಡಿಎಂಡಿಕೆ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜೊತೆ ಕೈಜೋಡಿಸಿ 29 ಸ್ಥಾನಗಳನ್ನು ಗೆದ್ದಿದ್ದರು.

ವಿಜಯಕಾಂತ್ ಅವರು 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು. ನಂತರ, ಎಐಎಡಿಎಂಕೆ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ, ವಿಜಯಕಾಂತ್ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡರು.

2016ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಕಾಂತ್ ಅವರು ಸಿಪಿಐ, ಸಿಪಿಎಂ, ಎಂಡಿಎಂಕೆ ಮತ್ತು ವಿಸಿಕೆ ಜೊತೆಗೆ ಪೀಪಲ್ಸ್ ವೆಲ್ಫೇರ್ ಫ್ರಂಟ್ ನ್ನು ಮುನ್ನಡೆಸಿದ್ದರು. ಆದರೆ, ಮೈತ್ರಿ ಯಾವುದೇ ಪರಿಣಾಮ ಬೀರಲಿಲ್ಲ. 2021ರ ವಿಧಾನಸಭೆ ಚುನಾವಣೆಯಲ್ಲೂ ಡಿಎಂಡಿಕೆಯ ಸಾಧನೆ ಕಳಪೆಯಾಗಿತ್ತು.

ಅವರು ತಮಿಳುನಾಡಿನ ಉಗ್ರ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು, ತಮ್ಮ ಶಕ್ತಿಯುತ ಬೆಂಕಿಯಂಥ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅನಾರೋಗ್ಯದಿಂದಾಗಿ ಅವರು ತೆರೆಮರೆಗೆ ಸರಿದಿದ್ದರು.

ಹಿಂದಿನ ಲೇಖನರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆಯಿಂದ ಹಿಂಗಾರು ರೈತರ ಬೆಳೆ ಸಮೀಕ್ಷೆ – 2023 ಆಪ್ ಬಿಡುಗಡೆ
ಮುಂದಿನ ಲೇಖನಕರವೇ ಪ್ರತಿಭಟನೆ : ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಚಿವ ಪರಮೇಶ್ವರ್ ಸೂಚನೆ