ಮನೆ ಮನರಂಜನೆ ದೇವರ ರೂಪದಲ್ಲಿ ಬಂದ ಅಭಿಮಾನಿಗಳ ದೇವರು: ‘ಲಕ್ಕಿಮ್ಯಾನ್‌’ ಚಿತ್ರ ವಿಮರ್ಶೆ

ದೇವರ ರೂಪದಲ್ಲಿ ಬಂದ ಅಭಿಮಾನಿಗಳ ದೇವರು: ‘ಲಕ್ಕಿಮ್ಯಾನ್‌’ ಚಿತ್ರ ವಿಮರ್ಶೆ

0

‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪುಗಳು, ಅವರು ನಟಿಸಿರುವ ಸಿನಿಮಾಗಳಲ್ಲಿ ಅವರು ಎಂದಿಗೂ ಜೀವಂತ. ‘ಅಪ್ಪು’ ಅನ್ನೋ ಎಂಬ ಒಂದು ಹೆಸರು ಕಿವಿಗೆ ಬಿದ್ದ ಕೂಡಲೇ ಅಭಿಮಾನಿಗಳು ಈಗಲೂ ಒಂದು ಕ್ಷಣ ಭಾವುಕರಾಗುತ್ತಾರೆ. ಅಷ್ಟೊಂದು ಆಳವಾಗಿ ಅಭಿಮಾನಿಗಳೆದೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರು ಇಳಿದುಬಿಟ್ಟಿದ್ದಾರೆ, ಅಭಿಮಾನಿಗಳ ಪಾಲಿಗೆ ಪರಮಾತ್ಮನಾಗಿದ್ದಾರೆ. ಇದೀಗ ಅವರ ಕಡೆಯ ಸಿನಿಮಾ ‘ಲಕ್ಕಿಮ್ಯಾನ್’ ತೆರೆಕಂಡಿದೆ. ಕಾಕತಾಳೀಯವೆಂದರೆ, ಪುನೀತ್ ರಾಜ್‌ಕುಮಾರ್ ಅವರಿಲ್ಲಿ ದೇವರ ರೂಪದಲ್ಲೇ ಕಾಣಿಸಿಕೊಂಡು, ದರ್ಶನ ನೀಡಿದ್ದಾರೆ.
ಲಕ್ಕಿಮ್ಯಾನ್ಕಥೆ ಏನು?
ತಮಿಳಿನಲ್ಲಿ ತೆರೆಕಂಡ ‘ಓಹ್ ಮೈ ಕಡವುಳೇ’ ಸಿನಿಮಾ ರಿಮೇಕ್ ಈ ‘ಲಕ್ಕಿಮ್ಯಾನ್‌’. ಚಿಕ್ಕಂದಿನಿಂದಲೂ ಜೊತೆಗಿರುವ ಗೆಳತಿಯನ್ನೇ ಮದುವೆಯಾದರೆ, ಜೀವನ ಸೂಪರ್ ಆಗಿರುತ್ತದೆ ಎಂಬ ಕನಸಿನೊಂದಿಗೆ ಅರ್ಜುನ್ (ಕೃಷ್ಣ) ತನ್ನ ಗೆಳತಿ ಅನು (ಸಂಗೀತಾ ಶೃಂಗೇರಿ) ಜೊತೆಗೆ ಮದುವೆ ಆಗುತ್ತಾನೆ. ಆದರೆ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಸಂಸಾರದಲ್ಲಿ ಉಂಟಾಗುವ ತಾಪತ್ರಯಗಳು ಒಂದೆರಡಲ್ಲ. ದಾಂಪತ್ಯ ಜೀವನದ ಮೇಲೆ ವಿಚ್ಛೇದನದ ಕರಿನೆರಳು ಬೀಳುತ್ತದೆ. ಇಂಥ ಸಂಕಷ್ಟದಲ್ಲಿ ಸಿಲುಕಿದ ಅರ್ಜುನನಿಗೆ ದೇವರು (ಪುನೀತ್‌ ರಾಜ್‌ಕುಮಾರ್‌) ಸಿಗುತ್ತಾರೆ. ಅವರು ಆತನಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ? ಅರ್ಜುನ್ ದಾಂಪತ್ಯ ಬದುಕು ಮುಂದೇನಾಗುತ್ತದೆ ಅನ್ನೋದೇ ಕಥೆ.
ದೇವರಾಗಿ ಬಂದ ಅಪ್ಪು
ಈ ಸಿನಿಮಾದಲ್ಲಿ ದೇವರ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್‌ ಜೊತೆಗೆ ಸಾಧು ಕೋಕಿಲ ಕೂಡ ಇದ್ದಾರೆ. ಇವರಿಬ್ಬರ ಕಾಂಬಿನೇಷನ್‌ನ ಸೀನ್‌ಗಳು ನೋಡುಗರನ್ನು ನಗಿಸುತ್ತವೆ. ಇಲ್ಲಿ ಪುನೀತ್ ಅವರದ್ದೇ ಧ್ವನಿ ಇದೆ. ತಮ್ಮ ಎಂದಿನ ಮಂದಹಾಸವನ್ನು ಚೆಲ್ಲುತ್ತ ಪುನೀತ್ ಲವಲವಿಕೆಯಿಂದ ನಟಿಸಿದ್ದಾರೆ. ಮೂಲ ಚಿತ್ರದಲ್ಲಿ ಇಲ್ಲದಿದ್ದರೂ, ಇಲ್ಲಿ ಪುನೀತ್ ಅವರಿಗೆ ಒಂದು ಫೈಟ್ ಸೀನ್‌ ಇದೆ. ಅದನ್ನು ವಿಶೇಷವಾಗಿ ಕಂಪೋಸ್ ಮಾಡಲಾಗಿದೆ ಮತ್ತು ಸಖತ್ ಮಜಾವಾಗಿದೆ. ಸಿನಿಮಾ ಮುಗಿದ ಮೇಲೆ ಪ್ರಭುದೇವ ಜೊತೆಗೆ ಒಂದು ಹಾಡಿಗೆ ಪುನೀತ್ ರಾಜ್‌ಕುಮಾರ್‌ ಭರ್ಜರಿ ಸ್ಟೆಪ್‌ ಕೂಡ ಹಾಕಿದ್ದಾರೆ. ಆದರೂ ಪುನೀತ್ ಅವರನ್ನು ತೆರೆಮೇಲೆ ಕಂಡಾಗೆಲ್ಲ ಪ್ರೇಕ್ಷಕರು ಭಾವುಕರಾಗುವುದಂತೂ ಖಚಿತ.

ಅರ್ಜುನ್ ನಾಗಪ್ಪ ಪಾತ್ರದಲ್ಲಿ ‘ಡಾರ್ಲಿಂಗ್’ ಕೃಷ್ಣ ಉತ್ತಮವಾಗಿ ನಟಿಸಿದ್ದಾರೆ. ಅವರಿಗಿಲ್ಲಿ ನಟನೆಗೆ ಸಾಕಷ್ಟು ಅವಕಾಶ ಇರುವ ಪಾತ್ರವೇ ಸಿಕ್ಕಿದೆ. ಸ್ನೇಹಿತನಾಗಿ, ಪ್ರೇಮಿಯಾಗಿ, ಪತಿಯಾಗಿ, ವಿರಹಿಯಾಗಿ ಅವರು ಅಕ್ಷರಶಃ ಅರ್ಜುನ್ ಪಾತ್ರವನ್ನು ಜೀವಿಸಿದ್ದಾರೆ. ಅನು ಪಾತ್ರ ಸಂಗೀತಾ ಶೃಂಗೇರಿ ಅವರಿಗೆ ಸೂಕ್ತವಾಗಿ ಹೊಂದಿಕೆಯಾಗಿದೆ. ರೋಷಿಣಿ ಪ್ರಕಾಶ್ ಅವರು ತಮ್ಮ ಅಭಿನಯದ ಮೂಲಕ ನೋಡುಗರಿಗೆ ಇಷ್ಟವಾಗುತ್ತಾರೆ. ಸಾಧು ಕೋಕಿಲ ಇದ್ದಷ್ಟು ಹೊತ್ತು ನಗುವಿಗೆ ಕೊರತೆ ಇಲ್ಲ. ಗೆಳೆಯನ ಪಾತ್ರದಲ್ಲಿ ನಟಿಸಿರುವ ನಾಗಭೂಷಣ್ ಮತ್ತೊಮ್ಮೆ ತಮಗೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ಕಾಮಿಡಿ ಟೈಮಿಂಗ್‌ನಿಂದ ಪ್ರೇಕ್ಷಕ ಮನಸಾರೆ ನಗುವಂತೆ ಮಾಡಿದ್ದಾರೆ. ಆರಂಭದಲ್ಲಿ ನಗಿಸಿ, ಅಂತ್ಯದಲ್ಲಿ ಭಾವುಕರನ್ನಾಗಿಸುತ್ತಾರೆ ರಂಗಾಯಣ ರಘು. ನಾಯಕನ ಅಪ್ಪ-ಅಮ್ಮನಾಗಿ ಸುಂದರ್ ರಾಜ್‌, ಸುಧಾ ಬೆಳವಾಡಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರಿಗೆ ‘ಲಕ್ಕಿಮ್ಯಾನ್‌’ ಮೊದಲ ಪ್ರಯತ್ನ. ಚೊಚ್ಚಲ ಯತ್ನದಲ್ಲೇ ಎಲ್ಲರ ಗಮನಸೆಳೆದಿದ್ದಾರೆ ಅವರು. ಬದುಕಿನ ಕುರಿತ ಒಂದಷ್ಟು ಸಂದೇಶಗಳು ಚೆನ್ನಾಗಿವೆ. ಸ್ನೇಹ, ಪ್ರೀತಿ, ದಾಂಪತ್ಯದ ಬಗ್ಗೆ ಉತ್ತಮವಾಗಿ ಹೇಳಲಾಗಿದೆ. ಜೊತೆಗೆ ಅವರ ಪ್ರಯತ್ನಕ್ಕೆ ತಂತ್ರಜ್ಞರ ತಂಡ ಸಾಥ್ ನೀಡಿದೆ.

ಮಂಜು ಮಾಂಡವ್ಯ ಬರೆದ ಸಂಭಾಷಣೆಗೆ ಹೆಚ್ಚುವರಿ ಅಂಕ ನೀಡಬಹುದು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕರು ಇನ್ನಷ್ಟು ಗಮನ ನೀಡುವ ಅವಶ್ಯಕತೆ ಇತ್ತು. ಇದೇ ಮಾತನ್ನು ಸಾಹಿತ್ಯಕ್ಕೂ ಹೇಳಬಹುದು. ಪುನೀತ್ ರಾಜ್‌ಕುಮಾರ್ ಮತ್ತು ಪ್ರಭುದೇವ ಅವರಂತಹ ಲೆಜೆಂಡ್‌ಗಳು ಕಾಣಿಸಿಕೊಂಡಿರುವ ಹಾಡಿಗೆ ಇನ್ನೂ ಉತ್ತಮವಾದ ಸಂಗೀತ ಮತ್ತು ಸಾಹಿತ್ಯ ಬರೆಯುವ ಅವಕಾಶವಿತ್ತು.