ನವದೆಹಲಿ : ಕೆಂಪುಕೋಟೆ ಬಳಿ ಸ್ಫೋಟಗೊಂಡ ಐ20 ಕಾರಿನಲ್ಲಿ ಫರಿದಾಬಾದ್ ವೈದ್ಯ ಡಾ. ಉಮರ್ ಯು ನಬಿ ಸೂಸೈಡ್ ಬಾಂಬರ್ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. 2,900 ಕೆಜಿ ಸ್ಫೋಟಕ ಪತ್ತೆಯಾದ ಫರಿದಾಬಾದ್ ಮಾಡ್ಯೂಲ್ ಜೊತೆ ಸಂಬಂಧ ಹೊಂದಿದ್ದ, ಪುಲ್ವಾಮಾ ಮೂಲದ ಉಮರ್ ಯು ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ನಬಿ ಸೋಮವಾರ ಏಕಾಂಗಿಯಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ. ತನಿಖಾಧಿಕಾರಿಗಳು ಈಗ ಕಾರಿನ ಚಾಲಕನದ್ದೆಂದು ಶಂಕಿಸಲಾಗಿರುವ ಕತ್ತರಿಸಿದ ಕೈಯನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದು ಕಾಶ್ಮೀರದಲ್ಲಿರುವ ನಬಿ ಕುಟುಂಬದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಈ ದಾಳಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ನಬಿ ಭಟ್ ಅವರ ಮಗ ಡಾ. ಉಮರ್ ಯು ನಬಿ ಫರಿದಾಬಾದ್‌ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಫೆಬ್ರವರಿ 24, 1989 ರಂದು ಜನಿಸಿದ ಉಮರ್ ಸದ್ಯ ಸೆರೆಯಾಗಿರುವ ಡಾ. ಅದೀಲ್ ಆಪ್ತ ಸ್ನೇಹಿತ ಎಂದು ವರದಿಯಾಗಿದೆ.
ಉಮರ್ ತಂದೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. 10-15 ವರ್ಷಗಳ ಹಿಂದೆ ಕೆಲಸ ತೊರೆದಿದ್ದರು ಉಮರ್‌ಗೆ ಇಬ್ಬರು ಸಹೋದರರು ಮತ್ತು ಒಬ್ಬಳು ಹಿರಿಯ ಸಹೋದರಿ ಇದ್ದಾರೆ. ಈ ಪೈಕಿ ಸಹೋದರ ಮತ್ತು ಅಕ್ಕನಿಗೆ ಮದುವೆಯಾಗಿದ್ದರೆ ಓರ್ವ ಸಹೋದರ ಅವಿವಾಹಿತ. ಈ ಘಟನೆಯ ಬೆನ್ನಲ್ಲೇ ಪೊಲೀಸರು ಉಮರ್ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಡಾ. ಉಮರ್ ಎನ್‌ಕ್ರಿಪ್ಟ್ ಮಾಡಿದ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಮೂಲಭೂತವಾದಿಗಳಾಗಿದ್ದ, ವೈದ್ಯಕೀಯ ವೃತ್ತಿಪರರ ಗುಂಪಿನ ಭಾಗವಾಗಿದ್ದ. ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನ್ನ ತಂಡವನ್ನು ಬಂಧಿಸಿದ್ದಕ್ಕೆ ನಾಪತ್ತೆಯಾಗಿದ್ದ ಉಮರ್ ಸಿಟ್ಟಾಗಿ ತನ್ನ ಬಳಿಯಿದ್ದ ಸ್ಫೋಟಕಗಳನ್ನು ಬಳಸಲು ನಿರ್ಧರಿಸಿರಬಹುದು. ಮುಂದೆ ನಾನು ಬಂಧನವಾಗಬಹುದು ಎಂಬುದನ್ನು ಅರಿತು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.















