ಮನೆ ರಾಜ್ಯ ರೈತ ಮುಖಂಡ, ಸಿಪಿಐ ನಾಯಕ ಎನ್.‌ ಶಿವಣ್ಣ ನಿಧನ

ರೈತ ಮುಖಂಡ, ಸಿಪಿಐ ನಾಯಕ ಎನ್.‌ ಶಿವಣ್ಣ ನಿಧನ

0

ತುಮಕೂರು (Tumakuru)-2019ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರ ಸೋಲಿಗೆ ಕಾರಣವಾಗಿದ್ದ ರೈತ ಮುಖಂಡ ಹಾಗೂ ಸಿಪಿಐ ನಾಯಕ ಎನ್.ಶಿವಣ್ಣ (80)ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುಬ್ಬಿ ತಾಲ್ಲೂಕು ನಂದಿಹಳ್ಳಿ ಶಿವಣ್ಣ ಅವರ ಜನ್ಮಸ್ಥಳವಾಗಿದ್ದು, ಬೆಂಗಳೂರಿನಲ್ಲಿ ಮಗನ ಮನೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ಪುತ್ರ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶಿವಣ್ಣ ಅವರ ಇಚ್ಛೆಯಂತೆ ದೇಹವನ್ನು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಶಿವಣ್ಣ ಅವರು ಎಐಟಿಯುಸಿ ರಾಜ್ಯ ಕಾರ್ಯದರ್ಶಿ, ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿ ಸಂಘಟನೆ ಮುನ್ನಡೆಸಿದ್ದರು. ಒಮ್ಮೆ ತುರುವೇಕೆರೆ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು. ಡಿಪ್ಲೊಮಾ ಶಿಕ್ಷಣ ಮುಗಿಸಿ, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ ಶಿವಣ್ಣ ಅವರು ಅಲ್ಲೂ ಕಾರ್ಮಿಕ ಸಂಘಟನೆ ಕಟ್ಟಿ ಬೆಳೆಸುವ ಮೂಲಕ ಕಾರ್ಮಿಕರಿಗೆ ಹಲವು ಸವಲತ್ತು ಕೊಡಿಸಿದ್ದರು. ನಂತರ ಕಾರ್ಮಿಕ ಸಂಘಟನೆ, ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವ ವಹಿಸಿಕೊಂಡು, ಅವರಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ನಿರತರಾಗಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಒಂದು ರೀತಿಯಲ್ಲಿ ದೇವೇಗೌಡರ ಸೋಲಿಗೂ ಶಿವಣ್ಣ ಕಾರಣರಾದರು ಎಂದು ವಿಶ್ಲೇಷಿಸಲಾಗಿತ್ತು. ಈ ಚುನಾವಣೆಯಲ್ಲಿ 15 ಸಾವಿರಕ್ಕೂ ಅಧಿಕ ಮತ ಗಳಿಸಿದ್ದರು. ಈ ಮತ ವಿಭಜನೆಯಿಂದಾಗಿಯೇ ದೇವೇಗೌಡರು ಸೋತರು ಎಂದು ವಿಶ್ಲೇಷಿಸಲಾಗಿತ್ತು.