ಮನೆ ಅಪರಾಧ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಪ್ರವಹಿಸಿ ರೈತ ಸಾವು

ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಪ್ರವಹಿಸಿ ರೈತ ಸಾವು

0

ಕೆ.ಆರ್.ಪೇಟೆ : ಸೆಸ್ಕ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತನೊಬ್ಬ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಅರೆಬೂವನ ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಅರೆಬೂವನಹಳ್ಳಿ ಗ್ರಾಮದ ರೈತ ಬಿ.ಎನ್.ಮಂಜುನಾಥ್ ಮೃತ ರೈತರಾಗಿದ್ದಾರೆ. ಮಂಜುನಾಥ್ ಅವರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿ, ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ಹುಲ್ಲು ಕುಯ್ಯುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈಗಾಗಲೇ ತಾಲ್ಲೂಕಿನಾದ್ಯಂತ ವಿದ್ಯುತ್‌ನಿಂದ ಹಲವಾರು ಜೀವಗಳು ಬಲಿಯಾಗುತ್ತಿದ್ದರೂ ತಾಲ್ಲೂಕಿನ ಸೆಸ್ಕ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಹಾಗೂ ಅರೆಬೂವನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಮನೆಯ ಒಡೆಯನನ್ನು ಕಳೆದುಕೊಂಡು ಮೃತ ಮಂಜುನಾಥ್ ಅವರ ಪತ್ನಿ ಸೇರಿದಂತೆ ಮಕ್ಕಳು ಆಘಾತಕ್ಕೀಡಾಗಿದ್ದು,ಸೆಸ್ಕ್ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಮೃತರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ, ತಾಲ್ಲೂಕಿನಾದ್ಯಂತ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಮುಂದೆ ನಡೆಯಬಹುದಾದ ಆಘಾತಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚೌಡೇನಹಳ್ಳಿ ನಾಗರಾಜು, ವಕೀಲ ಕುರುಬಳ್ಳಿ ನಾಗೇಶ್, ಮಂಚನಹಳ್ಳಿ ನಾಗೇಗೌಡ ಇತರರಿದ್ದರು.

ಈ ಸಂಬಂಧ ಮೃತ ಮಂಜುನಾಥ್ ಅವರ ಪುತ್ರ ಬಿ.ಎಂ. ಧರ್ಮೇಶ್ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.