ಮನೆ ಸ್ಥಳೀಯ ತಿ.ನರಸಿಪುರ ರಸ್ತೆ ಅಪಘಾತದಲ್ಲಿ ರೈತ ಸಾವು: ಹೆದ್ದಾರಿ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

ತಿ.ನರಸಿಪುರ ರಸ್ತೆ ಅಪಘಾತದಲ್ಲಿ ರೈತ ಸಾವು: ಹೆದ್ದಾರಿ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

0

ಮೈಸೂರು: ತಿ. ನರಸಿಪುರ ಕೊಳ್ಳೆಗಾಲ ಹೆದ್ದಾರಿಯಲ್ಲಿ 78 ವರ್ಷದ ರೈತ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರಣ ಅಲ್ಲಿನ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಹೆಚ್ ಎಐ) ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ರಸ್ತೆಯ ಮೇಲಿಂದ ಮೃತ ರೈತನ ತೆಗೆಯಲು ಪೊಲೀಸರಿಗೆ ಅಡ್ಡಿಯಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ರೈತ ನಾಗರಾಜ್ ತಮ್ಮ ಪುತ್ರನ ಜೊತೆಗೆ ಬೈಕ್ ಚಾಲನೆ ಮಾಡುತ್ತಿದ್ದಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ಎದುರು ಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ.

ರಸ್ತೆ ಮೇಲೆ ಬಿದ್ದ ನಾಗರಾಜ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನ ಪುತ್ರನ ಕಾಲುಗಳಿಗೆ ತೀವ್ರವಾಗಿ ಗಾಯಗಳಾಗಿದ್ದು, ಮತ್ತೊಂದು ಬದಿಯಲ್ಲಿದ್ದ ಬೈಕ್ ಸವಾರನಿಗೂ ಗಾಯಗಳಾಗಿ ಆತನ ಸ್ಥಿತಿ ಗಂಭೀರವಾಗಿದೆ.

ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಈ ಪ್ರದೇಶದಲ್ಲಿ ರಸ್ತೆ ಅಪಘಾತಗಳನ್ನು ತಡೆಯುವುದಕ್ಕೆ ಎನ್ ಹೆಚ್ ಎಐ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಮೇ ತಿಂಗಳಲ್ಲಿ ಕುರುಬೂರು ಗ್ರಾಮದಲ್ಲಿ ಖಾಸಗಿ ಬಸ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿದಂತೆ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದು, ಅಪಘಾತಗಳ ತಡೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ದೂರು ನೀಡಿದರೂ ಎನ್‌ ಎಚ್‌ ಎಐ ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.