ಮನೆ ರಾಜ್ಯ ಭುಗಿಲೆದ್ದ ರೈತರ ಆಕ್ರೋಶ: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ತಾತ್ಕಾಲಿಕ ಸ್ಥಗಿತ!

ಭುಗಿಲೆದ್ದ ರೈತರ ಆಕ್ರೋಶ: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ತಾತ್ಕಾಲಿಕ ಸ್ಥಗಿತ!

0

ತುಮಕೂರು: ಹೇಮಾವತಿ ನದಿಯಿಂದ ರಾಮನಗರಕ್ಕೆ ನೀರು ಸಾಗಿಸಲು ಕೈಗೆತ್ತಿಕೊಳ್ಳಲಾಗಿದ್ದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ವಿರುದ್ಧ ರೈತರ ಆಕ್ರೋಶ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಅದರ ಪರಿಣಾಮವಾಗಿ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ರೈತ ಸಮುದಾಯ ಈ ಯೋಜನೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು, ಇದರ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಾದ್ಯಂತ ಬಿಗಿಯಾದ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಪ್ರತಿಭಟನೆ ಮುಂದುವರೆಯದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಈ ಕ್ರಮಗಳ ನಡುವೆಯೂ ರೈತರ ಹೋರಾಟ ತೀವ್ರವಾಗಿ ಸಾಗಿದ್ದು, ಬಿಜೆಪಿ ಶಾಸಕ ಬಿ. ಸುರೇಶ್ ಗೌಡ, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿ 10ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ರೈತರು ಪೊಲೀಸರ ಕ್ರಮಗಳಿಗೆ ವಿರೋಧವಾಗಿ ವಾಹನಗಳ ಚಕ್ರಗಳ ಗಾಳಿಯನ್ನು ತೆಗೆದು ಹಾಕಿದರು. ಬಸ್‌ನ್ನು ಮಗುಚಿಸಲು ಯತ್ನಿಸಿದರು. ಜೆಸಿಬಿ ಮೂಲಕ ನೀರಿನ ಪೈಪ್‌ಗಳು ಹೋಗುವ ನಾಲೆಗಳನ್ನು ಮುಚ್ಚಿಸಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರ ಹಾಗೂ ರೈತರ ನಡುವೆ ಗಲಾಟೆ ಸಹ ಸಂಭವಿಸಿತು.

ಈ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸುರೇಶ್ ಗೌಡ, “ಸರ್ಕಾರ ರೈತ ವಿರೋಧಿ ನೀತಿ ಕೈಗೆತ್ತಿಕೊಂಡಾಗ ನಾವು ಹೋರಾಟ ಮಾಡದೆ ಬೇರೆ ಮಾರ್ಗವಿಲ್ಲ. 10ಕ್ಕೂ ಹೆಚ್ಚು ತಾಲೂಕುಗಳಿಗೆ ನೀರನ್ನು ಕಡಿತ ಮಾಡಿ, ಒಂದೇ ಒಂದು ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿರುವುದಕ್ಕೆ ನಮ್ಮ ವಿರೋಧ ಇದೆ. ನಾಲೆ ಮುಚ್ಚಲು ನಾವೇ ಸಿದ್ಧರಿದ್ದೇವೆ. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಗೌರವ ಕೊಟ್ಟು ಗಾಂಧಿ ಮಾರ್ಗದಲ್ಲಿ ಹೋರಾಟ ಮಾಡುತ್ತಿದ್ದೇವೆ. ಇದು ದೌರ್ಬಲ್ಯ ಎಂದುಕೊಂಡು ಒಂದು ವೇಳೆ ಕೆಲಸ ಶುರುಮಾಡಿದರೆ ನಮ್ಮ ಮೇಲೆ ನಾಲೆ ಮುಚ್ಚಿ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.