ಮಂಡ್ಯ: ರೈತರ ಭೂಮಿ ಕಬಳಿಸಲು ಉಳ್ಳವರು ಮುಂದಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದ್ದು,ಭೂಗಳ್ಳರು, ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆಗೆ ರೈತರು ಕಂಗಾಲಾಗಿದ್ದಾರೆ.
ದಶಕಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಗೆ ಕಾಲಿಡದಂತೆ ರೈತರಿಗೆ ಅಡ್ಡಗಾಲು ಹಾಕಿದ್ದಾರೆ. ಭೂ ಕಬಳಿಕೆಗಾಗಿ ನಕಲಿ ದಾಖಲೆ ಸೃಷ್ಟಿ ಆರೋಪ ಮಾಡಿ, ಸರ್ಕಾರಿ ಭೂಮಿ ಅಕ್ರಮ ಖಾತೆ ಮಾಡಿಸಿಕೊಂಡು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮದಲ್ಲಿ ಸುಮಾರು 700 ಎಕರೆ ಗೋಮಾಳ ಜಾಗದಲ್ಲಿ 150 ಎಕರೆಗೂ ಹೆಚ್ಚು ಜಾಗದಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ನೂರಾರು ಎಕರೆ ಗೋಮಾಳದ ಜಾಗ ಒತ್ತುವರಿ ಮಾಡಿರುವ ಆರೋಪ ಮಾಡಲಾಗಿದೆ.
ದಲಿತರು, ಮುಸ್ಲಿಂ ಸಮುದಾಯದವರು ಸುಮಾರು 30 ವರ್ಷಗಳಿಂದ ಸರ್ವೇ ನಂ. 277ರಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಭೂಕಬಳಿಕೆಯಿಂದ ಧನಗೂರು ಗ್ರಾಮದ 60ಕ್ಕೂ ಹೆಚ್ಚು ಜನ ರೈತರಿಗೆ ಅನ್ಯಾಯವಾಗಿದ್ದು, 1996ರಲ್ಲೇ ಫಾರಂ ನಂಬರ್ 53ಕ್ಕೆ ರೈತರು ಅರ್ಜಿ ಹಾಕಿದ್ದಾರೆ.
ಕಾಲುವೆ ನೀರು ಹಾಗೂ ಮಳೆ ಇಲ್ಲದ ಕಾರಣ ಎರಡು ವರ್ಷದಿಂದ ಉಳುಮೆ ಮಾಡದೆ ಜಮೀನು ಪಾಳು ಬಿಟ್ಟಿದ್ದರು.
ಭೂಗಳ್ಳರ ಪರ ಅಧಿಕಾರಿಗಳು ಕೆಲಸ ಮಾಡಿರುವ ಆರೋಪ ಕೇಳಿಬಂದಿದ್ದು, ಇದರ ಹಿಂದೆ ಯಾರ್ಯಾರ ಕೈವಾಡ ಇದೆ ಎಂದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಭೂಗಳ್ಳರು ದೌರ್ಜನ್ಯ, ದಬ್ಬಾಳಿಕೆ ನಡೆಸಿ ನಮ್ಮ ಜಮೀನು ಒತ್ತುವರಿ ಮಾಡಿದ್ದಾರೆ. ನಮ್ಮ ಜಾಗಕ್ಕೆ ಹೋಗಲು ಬಿಡದೆ ಹೆದರಿಸಿ ತೊಂದರೆ ಕೊಡ್ತಿದ್ದಾರೆ. ನಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಅವಕಾಶ ಮಾಡಿಕೊಡಬೇಕು. ಭೂಗಳ್ಳರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರೈತರು ಆಗ್ರಹಿಸಿದ್ದಾರೆ.