ಚಾಮರಾಜನಗರ: ಸದನದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ವ್ಯರ್ಥ ಎಂಬ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹೇಳಿಕೆ ವಾಪಸ್ ಪಡೆದು ರೈತರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಅಂಚೆ ಕಚೇರಿ ಬಳಿ ಹೆದ್ದಾರಿಯಲ್ಲಿ ಧರಣಿ ಕುಳಿತು ವಾಹನ ಸಂಚಾರವನ್ನು ತಡೆದ ಪ್ರತಿಭಟನಕಾರರು ಡಿಕೆಶಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಉಪಮುಖ್ಯಮಂತ್ರಿ ಶಿವಕುಮಾರ್ ಹೇಳಿಕೆ ಖಂಡನೀಯ. ಕೆರೆ ತುಂಬಿಸುವ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ರೈತರು, ಸಾರ್ವಜನಿಕರ ದುಡ್ಡಿನಿಂದಲೇ ಯೋಜನೆ ಅನುಷ್ಠಾನಗೊಳಿಸಲಾಗಿದೆಯೇ ವಿನಾ, ಡಿಕೆಶಿಯವರ ಸ್ವಂತ ದುಡ್ಡಿನಿಂದಲ್ಲ. ರಾಜ್ಯದ ಆಡಳಿತ ನಡೆಸುವುದಕ್ಕಾಗಿ ನಾವು ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಕಿಡಿಕಾರಿದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೈತರ ಜೀವನಾಡಿಯಾಗಿದ್ದು, ವಲಸೆ ಹೋಗಿದ್ದ ಎಷ್ಟೋ ರೈತ ಕುಟುಂಬಗಳು ಪುನಃ ವ್ಯವಸಾಯಕ್ಕೆ ಮರಳಲು ಈ ಯೋಜನೆಯೇ ಕಾರಣ. ಇಂತಹ ಮಹತ್ವದ ಯೋಜನೆಯಿಂದ ಸರ್ಕಾರಕ್ಕೆ ಯಾವುದೇ ಉಪಯೋಗವಿಲ್ಲ ಎಂದಿರುವುದು ರೈತ ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ. ಸಾರ್ವಜನಿಕರಿಗೆ ಉಪಯೋಗವಿಲ್ಲದ ಅನೇಕ ಯೋಜನೆಗಳನ್ನು ಸರ್ಕಾರಗಳು ಕೈಗೊಂಡು ಸಾಕಷ್ಟು ಹಣ ವ್ಯರ್ಥ ಮಾಡಿವೆ. ಹೀಗಿರುವಾಗ ದೇಶಕ್ಕೆ ಅನ್ನ ನೀಡುವ ರೈತನ ಯೋಜನೆಗಳನ್ನು ಉಪಯೋಗಕ್ಕೆ ಬಾರದ್ದು ಎಂದು ಸದನದಲ್ಲಿ ಹೇಳಿಕೆ ಕೊಟ್ಟಿರುವುದು ಖಂಡನೀಯ. ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಕೈಬಿಟ್ಟರೆ ಗಣಿ ಮಾಲೀಕರಿಗಲ್ಲದೆ ಬೇರೆ ಯಾರಿಗೂ ಉಪಯೋಗವಿಲ್ಲ. ಡಿ.ಕೆ.ಶಿವಕುಮಾರ್‌ರವರು ತಮ್ಮ ಹೇಳಿಕೆ ಹಿಂಪಡೆದು ರೈತ ಸಮುದಾಯಕ್ಕೆ ಕ್ಷಮೆ ಕೊರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಭೇಟಿ ನೀಡಿ ಪ್ರತಿಭಟನಕಾರರ ಅಹವಾಲು ಆಲಿಸಿದರು. ರೈತರು ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.