ಮನೆ ಕೃಷಿ ಮಹೇಶ್ ಭಟ್ ವಿರುದ್ಧ ರೈತರ ಪ್ರತಿಭಟನೆ

ಮಹೇಶ್ ಭಟ್ ವಿರುದ್ಧ ರೈತರ ಪ್ರತಿಭಟನೆ

0

ಬೆಂಗಳೂರು(Bengaluru): ಹೆಸರಘಟ್ಟ ಹುಲ್ಲುಗಾವಲು ಪ್ರದೇಶಕ್ಕೆ ಸಂಬಂಧಿಸಿದಂತೆ ಸುಳ್ಳು ಮತ್ತು ಅವೈಜ್ಞಾನಿಕ ದಾಖಲೆ ನೀಡಿ ಸರ್ಕಾರದ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆಂದು ಆರೋಪಿಸಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಮತ್ತು ಗ್ರಾಮಸ್ಥರು  ಹೆಸರುಘಟ್ಟದ ಮಹೇಶ್ ಭಟ್ ಮನೆಗೆ ನುಗ್ಗಿ ಪ್ರತಿಭಟನೆ ನಡೆಸಿದರು.

ರಾಜ್ಯ ವನ್ಯಜೀವಿ ಮಂಡಳಿಯ ಕೆಲವು ಅಧಿಕಾರಿಗಳ ಜೊತೆ ಸೇರಿ ಪರಿಸರವಾದಿ ಎಂದು ಹೇಳಿಕೊಳ್ಳುವ ಮಹೇಶ್, ಗ್ರಾಮಸ್ಥರು ಮತ್ತು ಸಾರ್ವಜನಿಕರೊಂದಿಗೆ ಯಾವುದೇ ಚರ್ಚೆ ನಡೆಸದೇ ತಮ್ಮ ಮೂಗಿನ ನೇರಕ್ಕೆ ವರದಿಯನ್ನು ಸಿದ್ಧಪಡಿಸಿ ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನಿನ ಪ್ರಕಾರ ಸಾರ್ವಜನಿಕರು, ಸಂಘಸಂಸ್ಥೆಗಳು, ಗ್ರಾಮಸ್ಥರು, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಬೇಕು ಮತ್ತು ಸದರಿ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುವ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಬೇಕು.  ನಂತರವಷ್ಟೇ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲು ಅವಕಾಶವಿದೆ. ಆದರೆ, ಹೆಸರಘಟ್ಟ ವಿಚಾರದಲ್ಲಿ ರಾಜ್ಯ ವನ್ಯಜೀವಿ ಮಂಡಳಿಯಾಗಲೀ ಅಥವಾ ವರದಿ ಸಿದ್ಧಪಡಿಸಿದ ನಕಲಿ ಪರಿಸರವಾದಿ ಮಹೇಶ್ ಭಟ್ ಆಗಲೀ ಯಾವುದೇ ಜನಾಭಿಪ್ರಾಯ ಸಂಗ್ರಹ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದರು.

ಈ ಕಪೋಲಕಲ್ಪಿತ ವರದಿಯ ಆಧಾರದಲ್ಲಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಹೆಸರಘಟ್ಟದ ಹುಲ್ಲುಗಾವಲನ್ನು ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಣೆ ಮಾಡುವ ಪ್ರಸ್ತಾವನೆಯನ್ನು ತರಾತುರಿಯಲ್ಲಿ ಮಂಡಿಸಲು ವಿಫಲ ಯತ್ನ ನಡೆಸಿದೆ. ಇದರಿಂದಾಗಿ ಹೆಸರಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ದಿನನಿತ್ಯದ ಬದುಕು ಅಸ್ಥವ್ಯಸ್ತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ವನ್ಯಜೀವಿ ಮಂಡಳಿಯ ನಡೆಯನ್ನು ಪಕ್ಷಾತೀತವಾಗಿ ಖಂಡಿಸಿ ಹೆಸರಘಟ್ಟ ಮತ್ತು ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು “ಹೆಸರಘಟ್ಟ ಗ್ರಾಮ ಉಳಿಸಿ- ಗ್ರಾಮಸ್ಥರನ್ನು ರಕ್ಷಿಸಿ” ಎಂಬ ಬೃಹತ್ ಪ್ರತಿಭಟನೆ ನಡೆಸಿದ್ದರು.

ಪರಿಸರವಾದಿ ಎಂದು ಹೇಳಿಕೊಳ್ಳುತ್ತಿರುವ ಮಹೇಶ್ ಭಟ್ ಎಂಬ ವ್ಯಕ್ತಿ ಮತ್ತು ಇನ್ನಿಬ್ಬರ ಜೊತೆಗೂಡಿ ನಕಲಿ ಹಾಗೂ ಅವೈಜ್ಞಾನಿಕ ದಾಖಲೆಗಳ ವರದಿಯನ್ನು ಸರ್ಕಾರ ಮತ್ತು ಪಶು ಸಂಗೋಪನಾ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ನೀಡಿ ಮಾಡಿದ ಕುತಂತ್ರ ನಡೆಸಿದ್ದಾರೆ. ಸ್ಥಳೀಯ ರೈತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ದಿನನಿತ್ಯದ ಜೀವನವನ್ನು ಅಸ್ಥ – ವ್ಯಸ್ತ ಮಾಡಲು ಹೊರಟಿದ್ದವನ ಮನೆಗೆ ನುಗ್ಗಿ ಉಗ್ರ ಹೋರಾಟ ನಡೆಸಿದ್ದರು.

ಪ್ರತಿಭಟನೆಯಲ್ಲಿ ಹೆಸರಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನಪ್ರತಿನಿಧಿಗಳು, ರೈತರು , ಸಮಾಜ ಸೇವಕರು, ಗ್ರಾಮಗಳ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡು ಈ ಪ್ರಸ್ತಾವನೆಯನ್ನು ಮಂಡಿಸಿದರೆ ಮುಂದಿನ ದಿನಗಳಲ್ಲಿ  ಹೆಸರಘಟ್ಟದಲ್ಲಿ ಪ್ರಾರಂಭವಾಗಿರುವ ಪ್ರತಿಭಟನೆಯ ಕಿಚ್ಚು ಸುತ್ತಮುತ್ತಲಿನ ಗ್ರಾಮಗಳು ನಂತರ ಕ್ಷೇತ್ರದಾದ್ಯಂತ ಉಗ್ರರೂಪ ಪಡೆದುಕೊಳ್ಳಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.