ಮನೆ ಕಾನೂನು ರೈತರ ಪ್ರತಿಭಟನೆ: ಗಡಿ ಬಂದ್‌, ಅಂತರ್ಜಾಲ ಸ್ಥಗಿತ ವಿರೋಧಿಸಿ ಪಂಜಾಬ್ ಹೈಕೋರ್ಟ್‌ ಗೆ ಅರ್ಜಿ

ರೈತರ ಪ್ರತಿಭಟನೆ: ಗಡಿ ಬಂದ್‌, ಅಂತರ್ಜಾಲ ಸ್ಥಗಿತ ವಿರೋಧಿಸಿ ಪಂಜಾಬ್ ಹೈಕೋರ್ಟ್‌ ಗೆ ಅರ್ಜಿ

0

ವಿವಿಧ ರೈತ ಸಂಘಟನೆಗಳು ಪಂಜಾಬ್‌ನಿಂದ ದೆಹಲಿಗೆ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಜಾಥಾ ಸಿದ್ಧತೆಗಳಿಗೆ ಪ್ರತಿಕ್ರಿಯೆಯಾಗಿ ಹರಿಯಾಣದ ವಿವಿಧ ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವುದು ಮತ್ತು ಗಡಿಗಳನ್ನು ಮುಚ್ಚಿರುವುದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಗೆ ಸೋಮವಾರ ಅರ್ಜಿ ಸಲ್ಲಿಸಲಾಗಿದೆ.

ಪ್ರಕರಣವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗುರ್ಮೀತ್ ಸಿಂಗ್ ಸಂಧಾವಾಲಿಯಾ ಅವರಿದ್ದ ಪೀಠದೆದುರು ಸೋಮವಾರ ಪ್ರಸ್ತಾಪಿಸಲಾಯಿತು. ಪೀಠವು ಈ ವಿಚಾರದಲ್ಲಿ ಸರ್ಕಾರದ ಪ್ರತಿಕ್ರಿಯೆ ಕೇಳಿ ಪ್ರಕರಣದ ವಿಚಾರಣೆಯನ್ನು ಇಂದಿಗೆ (ಫೆಬ್ರವರಿ 13) ಮುಂದೂಡಿತು. ಹೈಕೋರ್ಟ್‌ ವಕೀಲ ಉದಯ್ ಪ್ರತಾಪ್ ಸಿಂಗ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯ ಪ್ರಮುಖಾಂಶಗಳು

ಹರಿಯಾಣ ಮತ್ತು ಪಂಜಾಬ್ ನಡುವಿನ ಗಡಿಯನ್ನು ಅದರಲ್ಲಿಯೂ ಅಂಬಾಲಾ ಬಳಿಯ ಶಂಭು ಪ್ರದೇಶದಲ್ಲಿ ಮುಚ್ಚುವುದು ಕಾನೂನುಬಾಹಿರ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯಿದೆ ಜಾರಿ ಸೇರಿದಂತೆ ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 13ರಂದು ವಿವಿಧ ರೈತ ಸಂಘಗಳು ಆಯೋಜಿಸಿದ್ದ ‘ದೆಹಲಿ ಚಲೋ’ ಮೆರವಣಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಅವರ ಪ್ರಜಾಪ್ರಭುತ್ವದತ್ತ ಹಕ್ಕಿನ ಅಭಿವ್ಯಕ್ತಿ.

ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾದಂತಹ ಹಲವಾರು ಜಿಲ್ಲೆಗಳಲ್ಲಿ ಮೊಬೈಲ್ ಅಂತರ್ಜಾಲ ಸೇವೆಗಳು ಮತ್ತು ವಿಪುಲ ಎಸ್ಎಂಎಸ್ ಸ್ಥಗಿತಗೊಳಿಸಿರುವ ಹರಿಯಾಣ ಅಧಿಕಾರಿಗಳ ಕ್ರಮ ಕಳವಳಕಾರಿ.

ಈ ಕ್ರಮಗಳು ನಾಗರಿಕರ ಮಾಹಿತಿ ಮತ್ತು ಸಂವಹನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ.

ಕಾನೂನು ಆಳ್ವಿಕೆಯಿಂದ ನಿರ್ದೇಶಿತವಾದ ದೇಶದಲ್ಲಿ, ಕಾನೂನು ಜಾರಿ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳು ಕಾನೂನಿಗೆ ಅನುಗುಣವಾಗಿರಬೇಕು ಮತ್ತು ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಗೌರವಿಸಬೇಕು.

ಮೊಳೆಗಳ ಪಟ್ಟಿ, ಬಲಿಷ್ಠ ಕಾಂಕ್ರೀಟ್ ಗೋಡೆಗಳು, ವಿದ್ಯುತ್‌ ಮುಳ್ಳು ತಂತಿ ಬೇಲಿಗಳಂತಹ ಬ್ಯಾರಿಕೇಡ್‌ಗಳನ್ನು ಹಾಕಿರುವುದು ಕಾನೂನು ಆಳ್ವಿಕೆಗೆ ಒಳಪಟ್ಟ ಪ್ರಜಾಪ್ರಭುತ್ವ ಸಮಾಜದ ಅಡಿಪಾಯವನ್ನು ದುರ್ಬಲಗೊಳಿಸುವ ಅಪಾಯವಿದೆ.

ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳು ಮತ್ತು ಕಾನೂನು ತತ್ವಗಳಿಗೆ ಗೌರವ ದೊರೆಯಬೇಕು.