ಮನೆ ರಾಜ್ಯ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು:  ನಿರ್ಲಕ್ಷ್ಯದ ಮಾತಿಗೆ ಜೀಪ್ ಪಂಕ್ಚರ್‌

ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು:  ನಿರ್ಲಕ್ಷ್ಯದ ಮಾತಿಗೆ ಜೀಪ್ ಪಂಕ್ಚರ್‌

0

ಚಾಮರಾಜನಗರ(Chamarajanagara): ನಿರಂತರ ಆನೆ ದಾಳಿಯಿಂದ ಬೇಸತ್ತಿದ್ದ ರೈತರು‌ ಅರಣ್ಯಾಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಹುಂಡಿಪುರ ಗ್ರಾಮದಲ್ಲಿ ನಡೆದಿದೆ.

ಕಳೆದ ಹತ್ತಾರು ದಿನಗಳಿಂದ ಹುಂಡಿಪುರ, ಕೆಬ್ಬೇಪುರ ಭಾಗದಲ್ಲಿ ನಿರಂತರ ಆನೆ ದಾಳಿಗೆ ರೈತರು ಫಸಲು ಕಳೆದುಕೊಳ್ಳುತ್ತಿದ್ದಾರೆ. ಬುಧವಾರ ರವಿ ಹಾಗೂ ಕುಮಾರ್ ಎಂಬುವರ ಜಮೀನಿಗೆ ಲಗ್ಗೆಯಿಟ್ಟ ಗಜಪಡೆ ಲಕ್ಷಾಂತರ ರೂ.‌ ನಷ್ಟ ಉಂಟುಮಾಡಿದೆ. ತೆಂಗಿನ ಸಸಿ, ಸೋಲಾರ್ ಬೇಲಿ, ಗೇಟ್, ಬಾಳೆ ಫಸಲು ಸೇರಿದಂತೆ 3 ರಿಂದ 4 ಲಕ್ಷ ರೂ.‌ ಹಾನಿಯಾಗಿದೆಯಂತೆ.‌

ನಿರಂತರವಾಗಿ ಆನೆಗಳು ಬೆಳೆ ನಾಶ ಮಾಡುತ್ತಿದೆ ಎಂದು ದೂರಿದರೂ ಅರಣ್ಯಾಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದಾರೆಂದು ರೈತರು ಆರೋಪಿಸಿದ್ದಾರೆ.

ಇಂದು ಘಟನಾ ಸ್ಥಳಕ್ಕೆ ಬಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕರೆ ಆರ್‌ಎಫ್ಒ ಶ್ರೀನಿವಾಸ್ ಹಾಗೂ ಗೋಪಾಲಸ್ವಾಮಿ ಬೆಟ್ಟ ಆರ್‌ಎಫ್ ನವೀನ್ ಕುಮಾರ್ ಅವರಿಗೆ ರೈತರು ಕ್ಲಾಸ್ ತೆಗೆದುಕೊಂಡರು.‌

ಎಸಿಎಫ್ ಹಾಗೂ ಸಿಎಫ್ಒ ಸ್ಥಳಕ್ಕೆ ಬಂದು ಆನೆ ದಾಳಿಗೆ ನಿಯಂತ್ರಿಸಬೇಕೆಂದು ರೈತರು ಪಟ್ಟುಹಿಡಿದ ವೇಳೆ ಸ್ಥಳದಿಂದ ತೆರಳಲು ಮುಂದಾದ ಅರಣ್ಯಾಧಿಕಾರಿಗಳ ಜೀಪಿನ ಗಾಳಿ ತೆಗೆದು ಪಂಕ್ಚರ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಚೌಡಹಳ್ಳಿ ಗ್ರಾಮ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರ ಸ್ವಗ್ರಾಮವೂ ಆಗಿದೆ. ಸದ್ಯ ರೈತರು ಮೇಲಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದಿದ್ದು, ಸ್ಥಳದಲ್ಲಿ ಗುಂಡ್ಲುಪೇಟೆ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.