ಆನೇಕಲ್: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಕೋರ್ಟ್ ಆವರಣದಲ್ಲಿ ವಕೀಲರೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ.
ಕಣ್ಣನ್ ಹಲ್ಲೆಗೊಳಗಾದ ವಕೀಲ. ವಕೀಲರ ಸಹಾಯಕ ಆನಂದ್ ಕುಮಾರ್ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಡೀ ಆನೇಕಲ್ ಭಾಗ ಬೆಚ್ಚಿ ಬಿದ್ದಿದೆ. ಕಣ್ಣನ್ ಹೊಸೂರು ಕೆರೆ ಬೀದಿಯ ಮೂಲದವರಾಗಿದ್ದು, ಖ್ಯಾತ ವಕೀಲ ಸತ್ಯನಾರಾಯಣ ಅವರ ಬಳಿ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಾಮಲ್ ಪೆತ್ತಾಟ್ನ ಆನಂದ್ ಕುಮಾರ್ ಮತ್ತೊಬ್ಬ ವಕೀಲರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
ನ್ಯಾಯಾಲಯದ ಸಂಕೀರ್ಣದಲ್ಲಿ ಕಣ್ಣನ್ ಅವರನ್ನು ಆನಂದ್ ಕುಮಾರ್ ಕುಡುಗೋಲಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಣ್ಣನ್ ಅವರನ್ನು ಸ್ಥಳೀಯರು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಕೀಲ ಕಣ್ಣನ್ ಅವರ ಕುತ್ತಿಗೆ, ತಲೆ, ಬೆನ್ನು ಸೇರಿದಂತೆ 5 ಕಡೆ ತೀವ್ರವಾಗಿ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ಪಡೆಯುತ್ತಿದ್ದು, ಆನಂದ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ವಕೀಲರ ಮೇಲೆ ಹಲ್ಲೇ ಮಾಡಿದ್ದನ್ನು ಖಂಡಿಸಿ ರಸ್ತೆಯಲ್ಲಿ ಕುಳಿತು ವಕೀಲರು ಪ್ರತಿಭಟನೆ ಮಾಡಿದರು.