ಮನೆ ಅಪರಾಧ ಭೀಕರ ರಸ್ತೆ ಅಪಘಾತ: ಇಬ್ಬರು ಮಕ್ಕಳು ಸೇರಿದಂತೆ 5 ಮಂದಿ ಸಾವು

ಭೀಕರ ರಸ್ತೆ ಅಪಘಾತ: ಇಬ್ಬರು ಮಕ್ಕಳು ಸೇರಿದಂತೆ 5 ಮಂದಿ ಸಾವು

0

ಶಹಜಾನ್​ಪುರ್​: ಉತ್ತರ ಪ್ರದೇಶದ ಪಿಲಿಭಿತ್ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ದಾರುಣ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಘಟನೆಯಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Join Our Whatsapp Group

ಶಹಜಹಾನ್‌ಪುರದ ಕಾಂಟ್ ಪ್ರದೇಶದ ನಾವಡಾ ನಾಗ್ಲಾ ಬನ್ವಾರಿ ಗ್ರಾಮದ ನಿವಾಸಿ ರಿಯಾಸತ್ ಅಲಿ, 10 ಮಂದಿ ಕುಟುಂಬ ಸದಸ್ಯರೊಂದಿಗೆ ದೆಹಲಿಗೆ ತೆರಳುತ್ತಿದ್ದರು. ರಾತ್ರಿ 10.30ರ ಸುಮಾರಿಗೆ ಬೇವಾರ್ – ಪಿಲಿಭಿತ್ ಹೆದ್ದಾರಿಯ ಮದನ್‌ಪುರದ ಬುದ್ವಾನಾ ಗ್ರಾಮದ ಬಳಿ ರಸ್ತೆಗೆ ಅಡ್ಡವಾಗಿ ಪ್ರಾಣಿಯೊಂದು ಓಡಿ ಬಂದಿದೆ. ಇದನ್ನು ರಕ್ಷಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಅಕ್ಕಿ ಚೀಲ ತುಂಬಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸ್ಥಳದಲ್ಲೇ ರಿಯಾಸತ್, ಅವರ ಪತ್ನಿ ಆಮ್ನಾ ಮತ್ತು 6 ವರ್ಷದ ಮಗಳು ಗುಡಿಯಾ ಸಾವನ್ನಪ್ಪಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್​ ವರಿಷ್ಠಾಧಿಕಾರಿ ರಾಜೇಶ್​ ಎಸ್​ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್​​ ಧರ್ಮೇಂದ್ರ ಪ್ರತಾಪ್​ ಸಿಂಗ್​ ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ತಕ್ಷಣಕ್ಕೆ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಡಿಕ್ಕಿ ಹೊಡೆದ ಟ್ರಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಮಿತಿ ಮೀರಿ ಪ್ರಯಾಣಿಸುತ್ತಿದ್ದ ಮಂದಿ: 7 ಜನ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದ ಕಾರಿನಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಕಾರು ಜಖಂ ಗೊಂಡಿದೆ. ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಇಬ್ಬರು ಅಸುನೀಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಸಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ಧರ್ಮೇಂದ್ರ ಪ್ರತಾಪ್​ ಸಿಂಗ್​ ತಿಳಿಸಿದ್ದಾರೆ.