ಬೆಳಗಾವಿ: ಪ್ರೀತಿಸಿದ ಹುಡುಗಿಯ ಮದುವೆಗೆ ವಿರೋಧಿಸಿದ್ದ ಪೋಷಕರು ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದು ಮಗನನ್ನು ಕೊಲೆ ಮಾಡಲಾಗಿದೆ.
ತಾಲ್ಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಮಂಜುನಾಥ ನಾಗಪ್ಪ ಉಳ್ಳಾಗಡ್ಡಿ(೨೫) ಕೊಲೆಯಾದವರು. ಅವರ ತಂದೆ ನಾಗಪ್ಪ ಉಳ್ಳಾಗಡ್ಡಿ(೬೮) ಹಾಗೂ ಹಿರಿಯ ಸಹೋದರ ಗುರುಬಸಪ್ಪ ಉಳ್ಳಾಗಡ್ಡಿ(೨೮) ಕೊಲೆ ಮಾಡಿದ್ದಾರೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹುಡುಗಿಯೋರ್ವಳನ್ನು ಮಂಜುನಾಥ ಪ್ರೀತಿಸುತ್ತಿದ್ದ. ಇದಕ್ಕೆ ಮನೆಯವರ ಒಪ್ಪಿಗೆ ಇರಲಿಲ್ಲ. ಹಾಗಾಗಿ ಪೋಷಕರೊಂದಿಗೆ ವಾಗ್ವಾದ ನಡೆದಿದೆ. ಆಗ ಹಿರಿಯ ಸಹೋದರ ಗುರುಬಸಪ್ಪ ಕಲ್ಲಿನಿಂದ ತಮ್ಮನ ತಲೆಗೆ ಹೊಡೆದಿದ್ದಾನೆ, ತಂದೆಯೂ ಧಾವಿಸಿ ಹೊಡೆದಿದ್ದಾನೆ. ತಲೆಗೆ ತೀವ್ರ ಪೆಟ್ಟು ತಗುಲಿ ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ಆತನ ಪೋಷಕರು ಮದುವೆಗೆ ವಿರೋಧಿಸಿದದ್ದರು. ವಿರೋದದ ನಡುವೆಯೇ ಅವನ ನಿಶ್ಚಿತಾರ್ಥವನ್ನು ನಡೆಸಲಾಯಿತು. ಮದುವೆಯ ಸಿದ್ಧತೆಗಳು ನಡೆಯುತ್ತಿದ್ದಾಗ, ಮಂಜುನಾಥ್ ಆಗಾಗ್ಗೆ ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಮಂಜುನಾಥ್ ಮದುವೆ ವೆಚ್ಚಕ್ಕಾಗಿ ೫೦,೦೦೦ ಹಣ ಕೇಳುತ್ತಿದ್ದನು ಮತ್ತು ನಿಯಮಿತವಾಗಿ ಕುಡಿದು ಜಗಳವಾಡುತ್ತಿದ್ದನು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮಂಜುನಾಥ್ ಶಾಂತಿಯುತ ವ್ಯಕ್ತಿ, ತಮ್ಮ ಜಮೀನಿನಲ್ಲಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ, ತಾನಾಯಿತು ತನ್ನ ಕೆಲಸವಾಯಿತು ಎಂಬಂತಿದ್ದ ಎಂದು ಆತನ ಸ್ನೇಹಿತ ಶಶಿಕಾಂತ್ ಹೇಳಿದ್ದಾನೆ, ಆದರೆ ಇತ್ತೀಚೆಗೆ ನಡೆದ ಹಲ್ಲೆಯಲ್ಲಿ ಅವನ ತಂದೆಯ ಕೈಯನ್ನು ಸಹ ಮುರಿದಿದ್ದ ಹೀಗಾಗಿ ಮಂಜುನಾಥ್ ವಿರುದ್ಧ ತಾಯಿ ಪೊಲೀಸ್ ದೂರು ದಾಖಲಿಸಿದ್ದರು ಎಂದು ಮಂಜುನಾಥನ ಸಂಬಂಧಿಗಳು ಆರೋಪಿಸಿದ್ದಾರೆ.















