ಮನೆ ಕಾನೂನು ಅತ್ಯಾಚಾರಿ ತಂದೆಗೆ 25 ವರ್ಷ ಜೈಲು ಶಿಕ್ಷೆ

ಅತ್ಯಾಚಾರಿ ತಂದೆಗೆ 25 ವರ್ಷ ಜೈಲು ಶಿಕ್ಷೆ

0

ಹದಿಹರೆಯದ ಮಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ 37 ವರ್ಷದ ವ್ಯಕ್ತಿಯೊಬ್ಬನಿಗೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ ಕಾಯಿದೆ) ಅಡಿಯಲ್ಲಿ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ 

[ಮಹಾರಾಷ್ಟ್ರ ಸರ್ಕಾರ ಮತ್ತು ಸಚಿನ್‌ ಸುರೇಶ್‌ ವಾಡೇಕರ್‌ ನಡುವಣ ಪ್ರಕರಣ].

ಘೋರ ಅಪರಾಧ ಎಸಗಿರುವ ಆರೋಪಿ ಕ್ಷಮೆಗೆ ಅರ್ಹನಲ್ಲ ಎಂದು ವಿಶೇಷ ನ್ಯಾಯಾಧೀಶೆ ಭಾರತಿ ಕಾಳೆ ಅಭಿಪ್ರಾಯಪಟ್ಟರು. 25 ವರ್ಷಗಳ ಜೈಲು ಶಿಕ್ಷೆಯೊಂದಿಗೆ ಆರೋಪಿಗೆ ₹20,000 ದಂಡವನ್ನೂ ವಿಧಿಸಲಾಗಿದ್ದು ಅದನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

“ತಂದೆಯೊಬ್ಬ ಭದ್ರತೆ, ನಂಬಿಕೆ ಹಾಗೂ ಪ್ರೀತಿಯ ಅಡಿಪಾಯವನ್ನು ಹಾಕುತ್ತಾನೆ. ತಂದೆ ತನ್ನ ಮಗಳ ಬದುಕನ್ನು ಸುರಕ್ಷಿತವಾಗಿಡುತ್ತಾನೆ. ಅವಳನ್ನು ನೋಯಿಸದಂತೆ ರಕ್ಷಿಸುತ್ತಾನೆ. ಆದರೆ (ಈ ಪ್ರಕರಣದಲ್ಲಿ) ಸಂತ್ರಸ್ತೆಯ ತಂದೆಯೇ ಅವಳಿಗೆ ಅಪಾರ ನೋವನ್ನುಂಟುಮಾಡಿದ್ದಾನೆ… ಬದುಕಿನ ಸೂಕ್ಷ್ಮ ಎಳೆಗಳ ಮೇಲೆ ಪರಿಣಾಮ ಬೀರುವಂತಹ ಘೋರ ಕೃತ್ಯ ಎಸಗಿರುವ ಆರೋಪಿ (ನ್ಯಾಯಾಲಯ) ಮೃದು ಧೋರಣೆ ತಳೆಯಲು ಅರ್ಹನಾಗಿಲ್ಲ” ಎಂದು ನ್ಯಾಯಾಧೀಶೆ ಹೇಳಿದರು.

ಹದಿಮೂರು ವರ್ಷದ ಬಾಲಕಿ ತನ್ನ ಅಜ್ಜಿ, ಚಿಕ್ಕಪ್ಪ, ತಂದೆ ಹಾಗೂ ಇಬ್ಬರು ಕಿರಿಯ ಸಹೋದರರೊಂದಿಗೆ ವಾಸಿಸುತ್ತಿದ್ದಳು. ಘಟನೆ ನಡೆಯುವ ಏಳು ವರ್ಷಗಳ ಮೊದಲು ಆಕೆಯ ತಾಯಿ ಅವರನ್ನು ತೊರೆದಿದ್ದಳು. ತಪ್ಪಿದ ಋತುಚಕ್ರದ ಬಗ್ಗೆ ಹುಡುಗಿಯ ಅಜ್ಜಿ ಪ್ರಶ್ನಿಸಿದಾಗ ತನ್ನ ತಂದೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಅಂಶವನ್ನು ಆಕೆ ಬಹಿರಂಗಪಡಿಸಿದ್ದಳು. ಮದ್ಯದ ಅಮಲಿನಲ್ಲಿ ಆರೋಪಿ ಅತ್ಯಾಚಾರ ಎಸಗುತ್ತಿದ್ದ. ಕನಿಷ್ಠ ಐದು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಬಾಲಕಿ ತುತ್ತಾಗಿದ್ದಳು.