ಮನೆ ಕಾನೂನು ಮಗಳನ್ನು ಭೇಟಿಯಾಗಲು ಕಸದ ವ್ಯಾನ್‌ನಲ್ಲಿ ತಲೆಮರೆಸಿಕೊಂಡ ತಂದೆ: ಪತ್ನಿ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಮಗಳನ್ನು ಭೇಟಿಯಾಗಲು ಕಸದ ವ್ಯಾನ್‌ನಲ್ಲಿ ತಲೆಮರೆಸಿಕೊಂಡ ತಂದೆ: ಪತ್ನಿ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

0

ಬೆಂಗಳೂರು: ಕಸ ಎತ್ತುವವರ ರೀತಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ತಮ್ಮ ಮಗಳನ್ನು ಭೇಟಿಯಾಗಲು ವಿನೂತನ ಐಡಿಯಾ ಬಳಸಿದ್ದ 36 ವರ್ಷದ ವ್ಯಕ್ತಿಯನ್ನು ಕರ್ನಾಟಕ ಹೈಕೋರ್ಟ್ ಅಪರಾಧದಿಂದ ಮುಕ್ತಗೊಳಿಸಿದೆ.

39 ವರ್ಷದ ವಿಚ್ಛೇದಿತ ಪತ್ನಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣವನ್ನು ಪ್ರಶ್ನಿಸಿದ ಪತಿಯ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಪುರಸ್ಕರಿಸಿದರು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (ಬಿ) ಅಡಿಯಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ನವದೆಹಲಿಯ ಕೌಟುಂಬಿಕ ನ್ಯಾಯಾಲದಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರು.

ಪತಿಗೆ ಪ್ರತಿ ಶನಿವಾರ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಪತ್ನಿಯ ನಿವಾಸದಲ್ಲಿ ತಮ್ಮ ಮಗಳನ್ನು ಭೇಟಿ ಮಾಡುವ ಅವಕಾಶ ನೀಡಲಾಗಿದೆ.  ಇದಾದ ನಂತರ ಕುಟುಂಬವು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ಮಗಳು ಸೆಪ್ಟೆಂಬರ್ 2020 ರಿಂದ ಹೆಂಡತಿಯೊಂದಿಗೆ ವಾಸವಿದ್ದಳು.

ಆಗಸ್ಟ್ 20, 2022 ರಂದು ಸಂಭವಿಸಿದ ಘಟನೆಯಿಂದಾಗಿ ಪತ್ನಿ ಪತಿಯ ವಿರುದ್ಧ ಸೆಪ್ಟೆಂಬರ್ 7, 2022 ರಂದು ಕೇಸ್ ದಾಖಲಿಸಿದರು. ಪತ್ನಿಯು ಪತಿಗೆ ಮೇಲ್ ಮಾಡಿ ಮಗಳ ಭೇಟಿಯನ್ನು ಆಗಸ್ಟ್ 27 ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು  ತಿಳಿಸಿದ್ದರು.  ಮೇಲ್  ಸ್ವೀಕರಿಸಿದ ಪತಿ ಅದು ತಮ್ಮ ಗಮನಕ್ಕೆ ಬಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದರು.  ಆದರೆ ಅವರು ಆಗಸ್ಟ್ 20 ರಂದು ತಮ್ಮ ಎಂಟು ವರ್ಷದ ಮಗಳನ್ನು ಭೇಟಿಯಾಗಲು ಪತ್ನಿಯ ಅಪಾರ್ಟ್ ಮೆಂಟ್ ಇದ್ದ ಕಟ್ಟಡ  ಪ್ರವೇಶಿಸಿದರು.

ಅಪಾರ್ಟ್‌ಮೆಂಟ್  ತಲುಪಿದ ಅವರು ಪತ್ನಿಯ ನಿಯಂತ್ರಣದಲ್ಲಿರುವ ಆ್ಯಪ್ ಮೂಲಕ ಗೇಟ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡು ಒಳಗೆ ಹೋಗಲು ಮೂರು ಬಾರಿ ಪ್ರಯತ್ನಿಸಿದಾಗ ಅನುಮತಿ ನಿರಾಕರಿಸಲಾಯಿತು. ಮುಂದಿನ ವಾರದವರೆಗೆ ಮಗಳನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಆತಂಕಗೊಂಡ ಅವರು ತಮ್ಮ ಕಾರನ್ನು ಅಲ್ಲಿಯೇ ಪಾರ್ಕ್ ಮಾಡಿ ಒಳಗೆ ಹೋಗಲು ತೆರಳಿದರು.

ಸೆಕ್ಯುರಿಟಿ ಗಾರ್ಡ್‌ಗಳು ಆತನನ್ನು ಹಿಂಬಾಲಿಸಿದಾಗ, ಅವರು ಕಸ ಹಾಕುವ ಟೈಲ್‌ಗೇಟ್‌ನಲ್ಲಿ ಕಸದ ವ್ಯಾನ್‌ಗೆ ಹತ್ತಿ ಕಸವನ್ನು ಕಾಯುತ್ತಿರುವಂತೆ ನಟಿಸಿದರು. ನಂತರ ಅವರು ಕಸ ಸಂಗ್ರಹಿಸುವವರ ಜೊತೆಗೆ ಹೆಂಡತಿಯ ಮನೆಗೆ ತಲುಪಿ ಮಗಳನ್ನು ಭೇಟಿಯಾಗಿ ಹಿಂತಿರುಗಿದರು.

ಘಟನೆ ನಡೆದ 15 ದಿನಗಳ ನಂತರ ಪತ್ನಿಯು ಕೇಸ್  ದಾಖಲಿಸಿದ್ದು, ತನ್ನ ತಂದೆಯನ್ನು ಇದ್ದಕ್ಕಿದ್ದಂತೆ ನೋಡಿದ ನಂತರ ತಮ್ಮ ಮಗಳು ಆಘಾತಕ್ಕೊಳಗಾಗಿದ್ದಾಳೆ ಎಂದು ಆರೋಪಿಸಿದ್ದಾಳೆ.

ಪತ್ನಿ ದಾಖಲಿಸಿರುವ ಕೇಸ್ ನಲ್ಲಿ ಯಾವುದೇ  ದಾಷ್ಟ್ಯತೆಯಿಲ್ಲ ಹೆಚ್ಚಿನ ತನಿಖೆ ಮುಂದುವರಿಸಲು ಅನುಮತಿ ನೀಡಿದರೆ, ಅದು ಮೇಲ್ನೋಟಕ್ಕೆ ಕಾನೂನಿನ ಪ್ರಕ್ರಿಯೆಯ ದುರುಪಯೋಗ ಮತ್ತು ಪತಿ ವಿರುದ್ಧ ಪತ್ನಿ ತನ್ನ  ಸೇಡು ತೀರಿಸಿಕೊಳ್ಳಲು  ಕಾನೂನಿನ ನಿಯಮಗಳನ್ನು ದುರುಪಯೋಗ ಮಾಡಿಕೊಂಡಂತೆ ಆಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹಿಂದಿನ ಲೇಖನಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್: ಹಿಜಾಬ್ ಮೇಲಿನ ನಿಷೇಧ ಹಿಂಪಡೆದುಕೊಳ್ಳುವ ಆದೇಶ ಹೊರಡಿಸಲು ಕೇವಲ 30 ನಿಮಿಷ ಸಾಕು
ಮುಂದಿನ ಲೇಖನಏಪ್ರಿಲ್ ವೇಳೆಗೆ ಬಿಎಂಟಿಸಿಗೆ 1, 400 ಹೊಸ ಎಲೆಕ್ಟ್ರಿಕ್  ಬಸ್ ಗಳು ಸೇರ್ಪಡೆ: ಸಿಎಂ ಸಿದ್ದರಾಮಯ್ಯ