ದೆಹಲಿ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಡಾ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿರುದ್ಧ ಭಾನುವಾರ ಫತ್ವಾ ಹೊರಡಿಸಲಾಗಿದೆ.
ಆದರೆ ರಾಮ ಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇಮಾಮ್ ಹೇಳಿದ್ದಾರೆ. ಫತ್ವಾ ಹೊರಡಿಸಿದ್ದು ಭಾನುವಾರ. ಆದರೆ ಜನವರಿ 22 ರ ಸಂಜೆಯಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ನಾನು ಕೆಲವು ಕರೆಗಳನ್ನು ರೆಕಾರ್ಡ್ ಮಾಡಿದ್ದೇನೆ. ಅದರಲ್ಲಿ ಕರೆ ಮಾಡಿದವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ .ನನ್ನನ್ನು ಪ್ರೀತಿಸುವವರು, ರಾಷ್ಟ್ರವನ್ನು ಪ್ರೀತಿಸುತ್ತಾರೆ. ನನ್ನನ್ನು ಬೆಂಬಲಿಸುತ್ತಾರೆ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಬೇಕು. ನಾನು ಪ್ರೀತಿಯ ಸಂದೇಶವನ್ನು ನೀಡಿದ್ದೇನೆ, ನಾನು ಯಾವುದೇ ಅಪರಾಧ ಮಾಡಿಲ್ಲ ನಾನು ಕ್ಷಮೆ ಕೇಳುವುದಿಲ್ಲ ಅಥವಾ ರಾಜೀನಾಮೆ ನೀಡುವುದಿಲ್ಲ, ಅವರು ಏನು ಬೇಕಾದರೂ ಮಾಡಬಹುದು ಎಂದು ಇಮಾಮ್ ಪ್ರತಿಕ್ರಿಯಿಸಿದ್ದಾರೆ.
ದೇವಾಲಯದ ಟ್ರಸ್ಟ್‌ನಿಂದ ಆಹ್ವಾನವನ್ನು ಸ್ವೀಕರಿಸಿದ ನಂತರ ಎರಡು ದಿನಗಳ ಕಾಲ ಆಲೋಚಿಸಿ, ನಂತರ ನಾನು ಅಯೋಧ್ಯೆಗೆ ಹೋಗಲು ನಿರ್ಧರಿಸಿದೆ ಎಂದು ಉಮರ್ ಅಹ್ಮದ್ ಇಲ್ಯಾಸಿ ಎಎನ್‌ಐಗೆ ತಿಳಿಸಿದ್ದಾರೆ. ಇದು ತನ್ನ ಜೀವನದ ಅತ್ಯಂತ ದೊಡ್ಡ ನಿರ್ಧಾರವಾಗಿದೆ. ನಾನು “ಸಾಮರಸ್ಯಕ್ಕಾಗಿ ಮತ್ತು ದೇಶಕ್ಕಾಗಿ” ಅಲ್ಲಿಗೆ ಹೋಗಿದ್ದೆ.
ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಹುದ್ದೆಯಲ್ಲಿರುವ ಕಾರಣ ನನ್ನನ್ನು ಆಹ್ವಾನಿಸಲಾಯಿತು. ಅಲ್ಲಿ ನನ್ನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು. ಸಮಾರಂಭದಲ್ಲಿ ಭಾಗವಹಿಸಿದ ನಂತರ, ನಮ್ಮ ನಂಬಿಕೆಗಳು ಬೇರೆಯಾಗಿರಬಹುದು, ಆದರೆ ನಮ್ಮ ದೊಡ್ಡ ಧರ್ಮ ಮಾನವೀಯತೆ ಎಂದು ನಾನು ಹೇಳಿದೆ ಎಂದು ಅಹ್ಮದ್ ಉಮರ್ ಇಲ್ಯಾಸಿ ಹೇಳಿದ್ದಾರೆ.
ಅವರು ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ, ಆದರೆ ಭಾರತವು ಇಸ್ಲಾಮಿಕ್ ರಾಷ್ಟ್ರವಲ್ಲ ಎಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ಅಲ್ಲಿ ಈ ಎಲ್ಲಾ ತಂತ್ರಗಳು ಕೆಲಸ ಮಾಡುತ್ತವೆ. ನಾನು ಹರಡುತ್ತಿರುವ ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಅವರು ಇಷ್ಟಪಡದಿದ್ದರೆ, ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹೇಳಿದ್ದಾರೆ.
ಅಂದ ಹಾಗೆ ಮುಖ್ಯ ಇಮಾಮ್ ವಿರುದ್ಧ ಫತ್ವಾ ಹೊರಡಿಸಿದ ಮೊದಲ ನಿದರ್ಶನ ಇದಾಗಿದೆ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರು ತಮ್ಮ ವಿರುದ್ಧದ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ದೆಹಲಿ ಪೊಲೀಸ್ ಕಮಿಷನರ್, ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ.