ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಮನಮುಟ್ಟುವಂತಹ ಘಟನೆ ನಡೆದಿದೆ. ಜಾತಿ ನಿಂದನೆಯ ಪ್ರಕರಣಕ್ಕೆ ಹೆದರಿದ 22 ವರ್ಷದ ಯುವಕ ಮಹಿಬೂಬ್ ನೇಣು ಬಿಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಬರುವುದು ತಂದೆಗೆ ಶಾಕ್ ಆಗಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ವಡಗೇರಾ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
ಮಹಿಬೂಬ್ ಹೆಸರಿನ ಯುವಕನ ಮನೆ ಸಮೀಪದ ಜಮೀನಿನಲ್ಲಿ ದಾರಿಯ ವಿವಾದವಾಗಿ ಕೆಲವು ದಿನಗಳ ಹಿಂದೆ ಜಗಳ ಸಂಭವಿಸಿತ್ತು. ಗ್ರಾಮದ ಹಿರಿಯರು ವಿಷಯವನ್ನು ಸ್ಥಳೀಯವಾಗಿ ನ್ಯಾಯ ಪಂಚಾಯತಿಯ ಮೂಲಕ ಬಗೆಹರಿಸಿದ್ದರು. ಆದರೆ ಬೇರೆ ಊರಿನ ಮುಖಂಡನೊಬ್ಬ, ಈ ಜಗಳದ ವಿಚಾರದಲ್ಲಿ ಮಹಿಬೂಬ್ ವಿರುದ್ಧ ಜಾತಿ ನಿಂದನೆಯ ಆರೋಪದಡಿ ಪೊಲೀಸ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದ.
“ಜಾತಿ ನಿಂದನೆ ಪ್ರಕರಣ ದಾಖಲಿಸಿ ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ” ಎಂಬ ಧಮ್ಕಿಗೆ ಹೆದರಿದ ಮಹಿಬೂಬ್, “ಜೈಲಿಗೆ ಹೋದರೆ ನನ್ನ ಜೀವನ ಕಳೆದು ಹೋಗುತ್ತದೆ, ಮನೆತನದ ಮಾನ ಹಾಳಾಗುತ್ತದೆ” ಎಂಬ ಭಾವನೆ ವ್ಯಕ್ತಪಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಹಿಬೂಬ್‌ನ ಆತ್ಮಹತ್ಯೆಯ ವಿಷಯ ತಿಳಿದ ತಂದೆ ಸೈಯದ್ ಅಲಿ ಅವರಿಗೆ ತೀವ್ರ ಮನೋವ್ಯಥೆ ಮತ್ತು ತೀವ್ರ ಆಘಾತದಿಂದ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಕಲಬುರಗಿಯ ಜಯದೇವ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಒಂದೇ ದಿನ, ಒಂದೇ ಕುಟುಂಬದಲ್ಲಿ ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿರುವುದು ಅಪಾರ ದುಃಖದ ಸಂದರ್ಭವನ್ನು ಉಂಟುಮಾಡಿದ್ದು, ಮನೆಯಲ್ಲೂ ಮತ್ತು ಗ್ರಾಮದಲ್ಲೂ ಆಘಾತ ಮತ್ತು ಶೋಕದ ವಾತಾವರಣ ಮೂಡಿದೆ. ಸ್ಥಳೀಯರು ಹಾಗೂ ಸಂಬಂಧಿಕರು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಯುವಕನ ಮೇಲೆ ಜಾತಿ ನಿಂದನೆಯ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಘಟನೆ ಜಾತಿ ಆಧಾರದ ನಿಂದನೆ ಮತ್ತು ಸಮಾಜದಲ್ಲಿ ಬೆದರಿಕೆಯ ಪರಿಸ್ಥಿತಿಗಳ ವಿರುದ್ಧ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.















