ಮನೆ ಕಾನೂನು ಫೆಮಾ ಉಲ್ಲಂಘನೆ ಪ್ರಕರಣ: ಇಡಿ V/S ಶಿಯೋಮಿ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಫೆಮಾ ಉಲ್ಲಂಘನೆ ಪ್ರಕರಣ: ಇಡಿ V/S ಶಿಯೋಮಿ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

0

ಬೆಂಗಳೂರು(Bengaluru): ಚೀನಾದ ಪ್ರಸಿದ್ದ ತಂತ್ರಜ್ಞಾನ ಕಂಪನಿ ಶಿಯೋಮಿ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿ ನಡೆಸಿದ ವಹಿವಾಟಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದ ಜಾರಿ ನಿರ್ದೆಶನಾಲಯದ ಆದೇಶ ವಿರುದ್ಧ ಶಿಯೋಮಿ ಸಲ್ಲಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು ತೀರ್ಪನ್ನು ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯದ(ಇಡಿ) ಆದೇಶ ಪ್ರಶ್ನಿಸಿ ಶಿಯೋಮಿ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್‌. ಜಿ ಪಂಡಿತ್ ಅವರ ನೇತೃತ್ವದ ಏಕ ಸದಸ್ಯ ಪೀಠವು ಉಭಯ ಪಕ್ಷಕಾರರ ಪ್ರಾಥಮಿಕ ಆಕ್ಷೇಪಣೆಯನ್ನು ಒಳಗೊಂಡ ಲಿಖಿತ ಟಿಪ್ಪಣಿಯನ್ನು ಆಧರಿಸಿ ತೀರ್ಪು ಕಾಯ್ದಿಟ್ಟಿದೆ.

ಇಡಿ ತನ್ನ ಆಕ್ಷೇಪಣೆಯಲ್ಲಿ ಶಿಯೋಮಿ ಆಕ್ಷೇಪವು ಅಪಕ್ವವಾಗಿದೆ. ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ನಂಬಬಹುದಾದ ವಿಚಾರಗಳಿದ್ದರೆ ತನಿಖೆ ನಡೆಸಬಹುದು. ಇಲ್ಲವಾದಲ್ಲಿ ಕಂಪನಿಯು ಆಸ್ತಿ ವಶಕ್ಕೆ ಪಡೆಯುವ ಇಡಿ ಆದೇಶವು ಕಾನೂನಿಗೆ ವಿರುದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಬೇಕು. ಶಿಯೋಮಿಯು ಯಾವುದೇ ಗುತ್ತಿಗೆ ಒಪ್ಪಂದ ಮಾಡಿಕೊಳ್ಳದೇ ಬೌದ್ಧಿಕ ಆಸ್ತಿ ಹಕ್ಕಿನ ಅಡಿ ವಿದೇಶಿ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದೆ ಎಂದು ತಿಳಿಸಿದೆ.

ಶಿಯೋಮಿ ಪರ ವಕೀಲರು ತಾವು ಸಲ್ಲಿಸಿದ ಆಕ್ಷೇಪಣೆಯಲ್ಲಿ ‘ಭಾರತದ ಹೊರಗಿರುವ ಮೂರು ವಿದೇಶಿ ತಂತ್ರಜ್ಞಾನ ಕಂಪನಿಗಳಿಗೆ ರಾಯಧನ ಪಾವತಿಸಿರುವುದು ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಸೆಕ್ಷನ್‌ 4ರ ಉಲ್ಲಂಘನೆ ಎನಿಸಿಕೊಳ್ಳುವುದಿಲ್ಲ. ಆದಾಯ ತೆರಿಗೆ ಇಲಾಖೆ ಇದನ್ನು ಕಾನೂನಾತ್ಮಕ ಎಂದು ಪರಿಗಣಿಸಿದ್ದು, ಕಡಿತ ಎಂದು ಪರಿಗಣಿಸಿದೆ’ ಎಂದು ಪ್ರಸ್ತಾಪಿಸಿದ್ದಾರೆ.

ತಂತ್ರಜ್ಞಾನ ರಾಯಧನ ಪಾವತಿಯನ್ನು 2015-16ರಿಂದ ಇಲ್ಲಿಯವರೆಗೆ ನೋಂದಾಯಿತ ಡೀಲರ್‌ಗಳ ಮೂಲಕ ಕಂಪನಿಯು ಪಾವತಿಸಿದೆ. ಶಿಯೋಮಿ ಭಾರತದ ಹೊರಗೆ ವಿದೇಶಿ ವಿನಿಮಯ ಹೊಂದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ, ಫೇಮಾದ ಸೆಕ್ಷನ್‌ 37ಎ ಅಡಿ ಜಾರಿ ನಿರ್ದೇಶನಾಲಯವು ಮಾಡಿರುವ ಆದೇಶವು ಅನೂರ್ಜಿತವಾದದ್ದು’ ಎಂದು ಶಿಯೋಮಿ ವಾದಿಸಿದೆ.

ಜಾರಿ ನಿರ್ದೇಶನಾಲಯವು ಕಂಪನಿಯ ಖಾತೆಯನ್ನು ನಿರ್ಬಂಧಿಸಿರುವುದರಿಂದ ವ್ಯವಹಾರಕ್ಕೆ ತೊಡಕಾಗಿದೆ. ಇದರಿಂದ ಉದ್ಯೋಗಿಗಳಿಗೆ ವೇತನ ಮತ್ತು ಸಂಬಳ ಪಾವತಿಸಲು ಅಡ್ಡಿಯಾಗಿದೆ ಎನ್ನುವುದನ್ನು ಶಿಯೋಮಿ ಪರ ವಕೀಲರು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.