ಮೈಸೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಈಗಾಗಲೇ ಹಲವರನ್ನು ಬಂಧಿಸಿ ಜೈಲಿಗಟ್ಟಿವೆ.
ನಗರದ ಉದಯಗಿರಿ ವ್ಯಾಪ್ತಿಯಲ್ಲಿರುವ ಮಾತಾ ಆಸ್ಪತ್ರೆಯಲ್ಲಿ ಅನಧಿಕೃತ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಕುರಿತು ಮೌಖಿಕ ದೂರಿನ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ನೋಟಿಸ್ ಅನ್ನು ಬೀಗ ಹಾಕಿರುವ ಮಾತಾ ಆಸ್ಪತ್ರೆಯ ಗೋಡೆಯ ಮೇಲೆ ಅಂಟಿಸಲಾಗಿದೆ. ಆದರೆ ಹಳೆಯ ನೋಟಿಸ್ ಅನ್ನೇ ಹೊಸದಾಗಿ ಅಂಟಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಂದ್ ಆಗಿರುವ ಉದಯಗಿರಿ ವ್ಯಾಪ್ತಿಯ ಮಾತಾ ಆಸ್ಪತ್ರೆಯ ಗೋಡೆಯ ಮೇಲೆ 22/06/2023ರ 5 ತಿಂಗಳ ಹಿಂದಿನ ನೋಟಿಸ್ ಅನ್ನು ಇಂದು ಬೆಳಿಗ್ಗೆ ಅಂಟಿಸಲಾಗಿದೆ. ಈ ನೋಟಿಸ್ ನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳು ನೀಡಿದ್ದು, ಈ ನೋಟಿಸ್ ನಲ್ಲಿ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಖಿಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ.

ಈ ಬಗ್ಗೆ ಲಿಖಿತವಾಗಿ 7 ದಿನಗಳ ಒಳಗೆ ಮಾಹಿತಿ ನೀಡುವಂತೆ ಮಾತಾ ಆಸ್ಪತ್ರೆಯ ಚಂದನ್ ಬಲ್ಲಾಳ್ ಅವರಿಗೆ ನೋಟಿಸ್ ನೀಡಲಾಗಿತ್ತು.
ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಸಂಬಂಧ ಮೈಸೂರಿನ ಮಾತಾ ಆಸ್ಪತ್ರೆಯ ಡಾಕ್ಟರ್ ಸೇರಿದಂತೆ 9 ಜನರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಕುರಿತು ಬೆಂಗಳೂರಿನ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಮಂಗಳವಾರ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಈ ಬಗ್ಗೆ ಪ್ರಾಥಮಿಕ ವರದಿ ನೀಡುವಂತೆ ಮೈಸೂರು ಜಿಲ್ಲೆಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕುಮಾರಸ್ವಾಮಿ, ಮುಚ್ಚಿರುವ ಮಾತಾ ಆಸ್ಪತ್ರೆಗೆ ಹಳೆಯ ದಿನಾಂಕವಿರುವ ನೋಟಿಸ್ ಅನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ನನಗೆ ಇಂದು ಮಾಹಿತಿ ತಿಳಿದಿದ್ದು, ಸ್ಪಷ್ಟನೆ ನೀಡುವಂತೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.













