ಮನೆ ಸ್ಥಳೀಯ ಭ್ರೂಣ ಹತ್ಯೆ ಮಾಡುವುದು ಕೊಲೆ ಮಾಡಿದ್ದಕ್ಕೆ ಸಮ: ನಿರ್ದೇಶಕ ಡಾ. ವಿವೇಕ್‌ ದೊರೈ

ಭ್ರೂಣ ಹತ್ಯೆ ಮಾಡುವುದು ಕೊಲೆ ಮಾಡಿದ್ದಕ್ಕೆ ಸಮ: ನಿರ್ದೇಶಕ ಡಾ. ವಿವೇಕ್‌ ದೊರೈ

0

ಮೈಸೂರು:  ಭ್ರೂಣ ಹತ್ಯೆ ಮಾಡುವುದು ಕೊಲೆ ಮಾಡಿದ್ದಕ್ಕೆ ಸಮನಾದ ಅಪರಾಧವಾಗಿದೆ ಎಂದು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪ ನಿರ್ದೇಶಕ ಡಾ. ವಿವೇಕ್‌ ದೊರೈ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌  ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ(ಲಿಂಗ ಆಯ್ಕೆಯ ನಿಷೇಧ) ಕುರಿತು ಮೈಸೂರು ವಿಭಾಗೀಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ದೇಶದಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ 1988ರಲ್ಲಿ ಪಿಎನ್‌ಡಿಟಿ ಕಾಯ್ದೆ ಜಾರಿಗೆ ಬಂದಿತು. ನಂತರ 1994ರಲ್ಲಿ ಕೇಂದ್ರ ಸರ್ಕಾರ ದೇಶಾಧ್ಯಂತ ಈ ಕಾಯ್ದೆಯನ್ನು ಜಾರಿಗೊಳಿಸಿತು. ಆದರೆ ಈ ಕಾಯ್ದೆ ಜಾರಿಯಾದರು ಪರಿಣಾಮಕಾರಿಯಾಗಿ ಅನುಷ್ಠಾನ ಆಗಿರಲಿಲ್ಲ. ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಬಳಿಕ 2001ರಲ್ಲಿ ಸುಪ್ರೀಂಕೋರ್ಟ್‌ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಆದೇಶ ನೀಡಿದ ನಂತರದಲ್ಲಿ ಕಾಯ್ದೆಯ ಅನುಷ್ಟಾನಕ್ಕೆ ಕ್ರಮವಹಿಸಲಾಯಿತು ಎಂದರು. 

ಕಾಯ್ದೆ ಜಾರಿಯಾದರೂ ದೇಶದಲ್ಲಿ ಇಂದಿಗೂ ಹೆಣ್ಣುಭ್ರೂಣ ಹತ್ಯೆ ಪ್ರಮಾಣ ಕಡಿಮೆಯಾಗಿಲ್ಲ. ಅಂಕಿ ಅಂಶಗಳ ಪ್ರಕಾರ 2001ರಿಂದ 4.6 ಲಕ್ಷ ಹೆಣ್ಣು ಭ್ರೂಣಹತ್ಯೆ ಮಾಡಲಾಗುತ್ತಿದ್ದು, ಇದು ದೇಶದ ಜನಸಂಖ್ಯೆಯ ಶೇ 5% ಕ್ಕಿಂತಲೂ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇದೇ ರೀತಿಯಾಗಿ ಹೆಣ್ಣುಭ್ರೂಣ ಹತ್ಯೆಗಳು ನಡೆಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಗಂಡು ಮಕ್ಕಳ ಸಂತತಿಯೇ ಹೆಚ್ಚಾಗಿ, ಹೆಣ್ಣು ಮಕ್ಕಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಲಿಂಗಾನುಪಾತ ಹಾಗೂ ಅದರಿಂದ ಉಂಟಾಗುವ ಸಮಸ್ಯೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. 

ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಮೈಸೂರು, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಯ ಕುಟುಂಬ ಕಲ್ಯಾಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ವಿಷಯ ನಿರ್ವಹಕರು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.