ಮನೆ ರಾಷ್ಟ್ರೀಯ ಗರ್ಭಕಂಠದ ಕ್ಯಾನ್ಸರ್‌ ವಿರುದ್ಧ ಸಮರ – ಹೆಣ್ಣು ಮಕ್ಕಳಿಗೆ ಕೇಂದ್ರದಿಂದ ಉಚಿತ ಲಸಿಕೆ..!

ಗರ್ಭಕಂಠದ ಕ್ಯಾನ್ಸರ್‌ ವಿರುದ್ಧ ಸಮರ – ಹೆಣ್ಣು ಮಕ್ಕಳಿಗೆ ಕೇಂದ್ರದಿಂದ ಉಚಿತ ಲಸಿಕೆ..!

0

ನವದೆಹಲಿ : ಗರ್ಭಕಂಠದ ಕ್ಯಾನ್ಸರ್‌ ತಡೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತ ಕ್ಯಾನ್ಸರ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದ ಯುವತಿಯರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವೇ 9 ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ದೇಶಾದ್ಯಂತ 9 ರಿಂದ 14 ವರ್ಷ ವಯಸ್ಸಿನ ಸುಮಾರು 8 ಕೋಟಿ ಮಕ್ಕಳು ಲಸಿಕೆ ಪಡೆಯಲಿದ್ದಾರೆ. ಲಸಿಕೆ ಅಭಿಯಾನವನ್ನು ಶಾಲೆಗಳು ಮತ್ತು ಸರ್ಕಾರದ ಅಸ್ತಿತ್ವದಲ್ಲಿರುವ ಲಸಿಕೆ ಕೇಂದ್ರಗಳ ಮೂಲಕ ನಡೆಸಲಾಗುತ್ತದೆ. 2020 ಮತ್ತು 2021 ರಲ್ಲಿ ಸ್ವೀಡನ್ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಅಧ್ಯಯನಗಳು ಹದಿಹರೆಯದವರಲ್ಲಿ ಲಸಿಕೆ ಹಾಕುವುದರಿಂದ 30 ವರ್ಷ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು 85% ಕ್ಕಿಂತ ಹೆಚ್ಚು ಕಡಿಮೆ ಮಾಡಬಹುದು ಎಂದು ತೋರಿಸಿವೆ.

ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದ್ದು, ಇದು ಸುಮಾರು 1.25 ಲಕ್ಷ ಜನರನ್ನು ಬಾಧಿಸುತ್ತದೆ ಮತ್ತು ಪ್ರತಿ ವರ್ಷ 75 ಸಾವಿರ ಮಂದಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಭಾರತ ಸರ್ಕಾರ ನೀಡುವ ಲಸಿಕೆಯನ್ನು ಅಮೆರಿಕ ಮೂಲದ ಮೆರ್ಕ್ & ಕಂಪನಿ ತಯಾರಿಸುತ್ತದೆ. ಅಮೆರಿಕ ಮತ್ತು ಕೆನಡದ ಹೊರಗಡೆ ಇದನ್ನು ಎಂಎಸ್‌ಡಿ ಎಂದು ಕರೆಯಲಾಗುತ್ತದೆ. ಲಸಿಕೆ ಒಕ್ಕೂಟವಾದ ಗವಿ ಜೊತೆ ಪಾಲುದಾರಿಕೆಯಲ್ಲಿ ಸರ್ಕಾರ ಸರಬರಾಜು ಮಾಡಲು ಮುಂದಾಗಿದೆ.

ಭಾರತದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ, ಗಾರ್ಡಸಿಲ್ 9 ಲಸಿಕೆಗೆ ಪ್ರತಿ ಡೋಸ್‌ಗೆ ಸುಮಾರು 10,850 ರೂ. ದರವಿದೆ. ಆದರೆ ಸರ್ಕಾರ ಪರಿಚಯಿಸಲಿರುವ ಕ್ವಾಡ್ರಿವೇಲೆಂಟ್ ಗಾರ್ಡಸಿಲ್ 4 – ಪ್ರತಿ ಡೋಸ್‌ಗೆ ಸುಮಾರು 3,000 – 4,000 ರೂ. ಬೆಲೆಯಿದೆ. ಈ ಲಸಿಕೆ ಸ್ವಯಂಪ್ರೇರಿತವಾಗಿದ್ದು ಕೇಂದ್ರ ಸರ್ಕಾರದ ಡಿಜಿಟಿಟಲ್‌ ವೇದಿಕೆಯಾದ U-WIN ಸ್ಲಾಟ್‌ಬುಕ್‌ ಮಾಡಿ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬಹುದು. ಆಯುಷ್ಮಾನ್ ಆರೋಗ್ಯ ಮಂದಿರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಉಪ-ಜಿಲ್ಲಾ ಮತ್ತು ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸೇರಿದಂತೆ ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಡೋಸ್‌ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.