ಗಂಗಾವತಿ: ವೈಯಕ್ತಿಕ ದ್ವೇಷದ ಕಾರಣ ಒಂದೇ ಕೋಮಿನ ಯುವಕರ ಗುಂಪುಗಳ ಮಧ್ಯೆ ಗಣಪತಿಯ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಘರ್ಷಣೆ ನಡೆದು ಓರ್ವನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.
ಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಯುವಕನಿಗೆ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಇನ್ನುಳಿದ ಮೂರು ಯುವಕರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ತಡರಾತ್ರಿ ಗಂಗಾವತಿ ನಗರದ ಭಗೀರಥ ವೃತ್ತದ ಹತ್ತಿರ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ಪೊಲೀಸ್ ಇಲಾಖೆ ನಿಷೇಧದ ಮಧ್ಯೆ ಡಿಜೆ ಹಾಕಿಕೊಂಡು ನೃತ್ಯ ಮಾಡುತ್ತಿದ್ದ ಒಂದೇ ಕೋಮಿನ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಮಚ್ಚು ಲಾಂಗು ಹಿಡಿದು ಸಂಘರ್ಷ ನಡೆಸಿದ್ದಾರೆ. ಮೆರವಣಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸರು ಮಧ್ಯೆ ಪ್ರವೇಶದಿಂದಾಗಿ ಹೆಚ್ಚಿನ ಅನಾವುತ ಸಂಭವಿಸಿಲ್ಲ.
ಘಟನೆಯಲ್ಲಿ ಅಂಬೇಡ್ಕರ್ ನಗರದ 38 ವರ್ಷ ಶಿವಕುಮಾರ ಅಂಬೇಡ್ಕರ್ ಇವರ ಹೊಟ್ಟೆಯ ಬಲಭಾಗಕ್ಕೆ ಚಾಕು ಇರಿಯಲಾಗಿದೆ.ಇನ್ನುಳಿದ ಗುಂಡಮ್ಮ ಕ್ಯಾಂಪಿನ ಗಣೇಶ , ಮಂಜು ಮತ್ತು ಸಾಗರ್ ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಮುತ್ತಣ್ಣ, ಧರ್ಮಣ್ಣ, ಬಾಬು, ವೆಂಕಟೇಶ, ಜಂಭ, ಹಾಗೂ ಇತರೆ 20 ಯುವಕರ ವಿರುದ್ದ ಹಲ್ಲೆ, ಕೊಲೆಗೆ ಯತ್ನ ಹಾಗೂ ಗಲಭೆ, ದೊಂಬಿ ಆರೋಪದಡಿಯಲ್ಲಿ ನಗರಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.