ಉಲ್ಲಾಳ: ನರಿಂಗಾನ ಗ್ರಾಮದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ ಸಂದರ್ಭ ಬಟ್ಟೆಗೆ ಸಾಂಬಾರು ಚೆಲ್ಲಿದ ಕಾರಣಕ್ಕೆ ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಿಬ್ಬರ ನಡುವೆ ಜಗಳ ನಡೆದಿದ್ದು, ಓರ್ವ ವಿದ್ಯಾರ್ಥಿಯ ಎದೆಗೆ ಚಾಕುವಿನಿಂದ ಇರಿದಿರುವ ಘಟನೆ ವರದಿಯಾಗಿದೆ.
ಶಾಲೆಯಲ್ಲಿ ಮಧ್ಯಾಹ್ನ ಊಟ ಮಾಡುತ್ತಿದ್ದ ವೇಳೆ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದು, ಬಟ್ಟೆಯಲ್ಲಿ ಕಲೆ ಆಗಿತ್ತು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಕಪಾಳ ಮೋಕ್ಷ ಮಾಡಿದ್ದಲ್ಲದೇ, ಆತನ ನೋಟ್ ಪುಸ್ತಕವನ್ನೇ ಸಾಂಬಾರಿಗೆ ಹಾಕಿ ತರಗತಿಯಿಂದ ಹೊರ ನಡೆದಿದ್ದಾನೆ.
ಇತ್ತ ಹೊಡೆಸಿಕೊಂಡ ವಿದ್ಯಾರ್ಥಿ ತನ್ನ ಬ್ಯಾಗ್ ನಿಂದ ಚೂರಿಯೊಂದನ್ನು ತೆಗೆದು ಹಲ್ಲೆಗೈದವನ ಮೇಲೆ ಎಸೆದಿದ್ದಾನೆ ಎನ್ನಲಾಗಿದೆ. ಆದರೆ, ಶಾಲಾ ವಿದ್ಯಾರ್ಥಿಯ ಬ್ಯಾಗಿನಲ್ಲಿ ಚಾಕು ಹೇಗೆ ಬಂತು ಎನ್ನುವುದೇ ಸದ್ಯ ಯಕ್ಷ ಪ್ರಶ್ನೆಯಾಗಿದೆ. ಘಟನೆಯ ದೃಶ್ಯಾವಳಿಗಳು ತರಗತಿ ಕೊಠಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವುದಾಗಿ ವರದಿಯಾಗಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ಕೂಡಲೇ ವೈಸ್ ಪ್ರಿನ್ಸಿಪಾಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಪರಿಣಾಮ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಧನ್ಯ ನಾಯಕ್, ಕೊಣಾಚೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಅವರನ್ನೊಳಗೊಂಡ ಅಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿದ್ದಾರೆ.
ಈ ಘಟನೆಯ ಕುರಿತಂತೆ ಮಕ್ಕಳ ನ್ಯಾಯಲಯಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.