ಪಾಂಡವಪುರ: ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ವಿಚಾರಣೆ ನಡೆಸಿ ಹಲವು ಪ್ರಕರಣಗಳನ್ನು ಸ್ಥಳದಲ್ಲೇ ಬಗೆಹರಿಸಲಾಗಿದೆ ಎಂದು ಲೋಕಾಯುಕ್ತ ಎಸ್‌ಪಿ ವಿ.ಜೆ.ಸಜಿತ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ದೂರಗಳನ್ನು ಸ್ವೀಕರಿಸಿ ದಾಖಲಿಸಿಕೊಂಡ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು ೨೬ ದೂರುಗಳು ಸಲ್ಲಿಕೆಯಾಗಿದೆ. ಮತ್ತೆ ಕೆಲವು ದೂರುಗಳನ್ನು ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಲೋಕಾಯುಕ್ತಕ್ಕೆ ದೂರು ನೀಡುವವರು ನಿಗದಿತ ನಮೂನೆ ಫಾರಂನಲ್ಲಿ ದಾಖಲೆ ಸಮೇತ ದೂರು ನೀಡಿದರೆ ತಕ್ಷಣ ವಿಚಾರಣೆ ಪ್ರಾರಂಭಿಸಲಾಗುವುದು. ಇಲ್ಲವಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಮತ್ತು ದಾಖಲೆಗಳನ್ನು ಕಲೆ ಹಾಕಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ತಾಲೂಕು ಮಟ್ಟದಲ್ಲಿ ಹೆಚ್ಚಾಗಿ ಎಡಿಎಲ್‌ಆರ್ (ಭೂಮಾಪನ ಇಲಾಖೆ), ಕಂದಾಯ ಇಲಾಖೆಯಲ್ಲಿನ ಖಾತೆ ವರ್ಗಾವಣೆ, ಹದುಬಸ್ತು, ಪೋಡಿ ಹಾಗೂ ಭೂ ವ್ಯಾಜ್ಯಗಳ ಆದೇಶಕ್ಕೆ ಸಂಬಂದಿಸಿದಂತೆ ದೂರುಗಳು ಕೇಳಿಬಂದಿದೆ. ಎಲ್ಲವನ್ನು ಪರಿಶೀಲಿಸಿದ ಬಳಿಕ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಲೋಕಾಯುಕ್ತ ಸಿವೈಎಸ್‌ಪಿ ಸುನೀಲ್‌ಕುಮಾರ್, ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ, ಸಿಬ್ಬಂದಿಗಳಾದ ಮಹದೇವಸ್ವಾಮಿ, ಶರತ್,ಎನ್.ಮಹದೇವ ಇದ್ದರು.
Saval TV on YouTube