ಬೆಂಗಳೂರು: ಚಿತ್ರರಂಗದ ಬೇಡಿಕೆಯಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲೇ ಸ್ಥಾಪಿಸುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಈ ಹಿಂದಿನ ಸರ್ಕಾರದಲ್ಲಿ ಈ ಫಿಲ್ಮ್ ಸಿಟಿಯನ್ನು ಬೆಂಗಳೂರಿಗೆ ವರ್ಗಾಯಿಸುವ ಉದ್ದೇಶ ಹೊಂದಿತು. ಇದೀಗ ಮತ್ತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದಾರೆ.ಇದರ ಜೊತೆಗೆ ಕನ್ನಡ ಚಿತ್ರರಂಗದ ಇತಿಹಾಸ, ಅದು ಬೆಳೆದು ಬಂದ ಇತಿಹಾಸ ತಿಳಿಸುವ ಸಂಗ್ರಹಾಯಲವನ್ನು ಬೆಂಗಳೂರಿನ ಕಂಠೀರವದಲ್ಲಿರುವ ಡಾ ರಾಜ್ ಕುಮಾರ್ ಸ್ಮಾರಕದ ಬಳಿ ನಿರ್ಮಾಣ ಮಾಡಲಾಗುವುದು. ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಈ ಯೋಜನೆಗೆ ಆಯ್ಕೆ ಸಮಿತಿ ರಚಿಸಿ ಮತ್ತು ಸಹಾಯ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು.
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗುವ ಮಾಸಾಶನ ಮೊತ್ತವನ್ನು 10 ಸಾವಿರದಿಂದ 12 ಸಾವಿರ ರೂಗೆ ಹೆಚ್ಚಳ ಮಾಡುವ ಘೋಷಣೆಯನ್ನು ಈ ಬಜೆಟ್ ನಲ್ಲಿ ಮಾಡಲಾಗಿದೆ. ಜೊತೆಗೆ ಮಾಸಾಶನ ಪಡೆಯುವ ಪತ್ರಕರ್ತರು ಮೃತಪಟ್ಟಾಗ ಕುಟುಂಬಕ್ಕೆ ನೀಡಲಾಗುವ ಮಾಸಾಶನ ಮೊತ್ತವನ್ನು ಮೂರು ಸಾವಿರದಿಂದ ಆರು ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.
ಮೈಸೂರು ರಾಜ್ಯವೂ ಕರ್ನಾಟಕ ಎಂದು ಮರುನಾಮಕರಣವಾಗಿ 2023ರ ನವೆಂಬರ್ ಗೆ 50 ವರ್ಷ ಪೂರ್ಣಗೊಳಲ್ಲಿರುವ ಹಿನ್ನೆಲೆ ಇಡೀ ವರ್ಷ ಹೆಸರಾಯಿತು. ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ನಾಡು ನುಡಿಗೆ ಸಂಬಂಧಿಸಿದ, ಯುವಜನತೆಯಲ್ಲಿ ಕನ್ನಡ – ಕನ್ನಡಿಗ – ಕರ್ನಾಟಕದ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು