ಧನಂಜಯ್ “ಕೋಟಿ’, ವಸಿಷ್ಠ “ಲವ್ ಲೀ’, ರಿಷಭ್ ನಿರ್ಮಾಣದ “ಶಿವಮ್ಮ’, ಅನಿರುದ್ಧ್ “ಶೆಫ್ ಚಿದಂಬರ’ ಚಿತ್ರಗಳು ಮುಂದಿನ ವಾರ ತೆರೆಕಾಣುತ್ತಿದೆ. ಅಲ್ಲಿಂದ ಸತತವಾಗಿ ಸಿನಿಮಾಗಳ ಬಿಡುಗಡೆ ಜೋರಾಗಿರಲಿದೆ. ಹೊಸಬರ, ಪರಿಚಿತ ಮುಖಗಳ, ಸ್ಟಾರ್‌ಗಳ… ಹೀಗೆ ಅನೇಕ ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಸಿನಿಮಾಗಳಿಗೆ ಇಡೀ ಚಿತ್ರರಂಗ ಪ್ರೋತ್ಸಾಹಿಸಿದಾಗ ಪ್ರೇಕ್ಷಕರಲ್ಲೂ ಒಂದು ಕುತೂಹಲ ಮೂಡಿ ಸಿನಿಮಾ ಗೆಲ್ಲಲು ಕಾರಣವಾಗುತ್ತದೆ.
ಈ ವಾರವೂ ಒಂದಷ್ಟು ಹೊಸಬರ ಸಿನಿಮಾಗಳು ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿವೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಸಿನಿಮಾದ ಗೆಲುವಿನ ಬಗ್ಗೆ. ಒಂದು ಸಿನಿಮಾ ಗೆಲ್ಲುತ್ತದೆ ಎಂಬ ಸೂಚನೆ ಸಿಕ್ಕಾಗ ಇಡೀ ಚಿತ್ರರಂಗ ಒಟ್ಟಾಗಿ ಆ ಚಿತ್ರದ ಪರ ನಿಲ್ಲಬೇಕು. ನಾವ್ಯಾಕೆ ಬೆಂಬಲಿಸಬೇಕು, ಕಾಸು ಬಂದರೆ ಅವರಿಗೆ ತಾನೇ ಎಂಬ ಸ್ವಾರ್ಥ ಮನಸ್ಥಿತಿಯನ್ನು ಮೊದಲು ಬದಿಗೊತ್ತಬೇಕು. ಒಂದು ಸಿನಿಮಾ ಗೆದ್ದರೆ ಆ ಗೆಲುವು ಚಿತ್ರರಂಗಕ್ಕೊಂದು ಹೊಸ ಜೋಶ್ ತುಂಬುತ್ತದೆ. ಪ್ರತಿ ಕ್ಷೇತ್ರ ಕ್ರಿಯಾಶೀಲವಾಗುತ್ತದೆ. ಚಿತ್ರರಂಗದ ಕಾರ್ಯಚಟುವಟಿಕೆಗಳೆಲ್ಲವೂ ವೇಗ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕೇ ಹೊರತು “ನನಗೇನು ಲಾಭ’ ಎಂಬ ಸಂಕುಚಿತತೆಯಿಂದಲ್ಲ.
ಕನ್ನಡ ಚಿತ್ರರಂಗ ಸದ್ಯ ಸಂಕಷ್ಟದಲ್ಲಿದೆ ನಿಜ. ಆದರೆ, ಕನ್ನಡ ಚಿತ್ರರಂಗದ 90 ವರ್ಷದ ಇತಿಹಾಸದಲ್ಲಿ ಇಂತಹ ಸಾವಿರಾರು ಸಮಸ್ಯೆಗಳನ್ನು, ಏರಿಳಿತಗಳನ್ನು ಕಂಡಿದೆ. ಒಂದು ಸಿನಿಮಾದ ಸಣ್ಣ ಗೆಲುವು ಕೂಡಾ ಇಡೀ ಚಿತ್ರರಂಗಕ್ಕೆ ಚೈತನ್ಯ ತುಂಬಬಲ್ಲದು. ಕೇವಲ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಎಲ್ಲಾ ಚಿತ್ರರಂಗಗಳಲ್ಲೂ ಸೋಲು, ನೋವು ಇದ್ದೇ ಇದೆ. ಈ ಕುರಿತು ಇತ್ತೀಚೆಗೆ ರಿಷಭ್ ಶೆಟ್ಟಿ ಮಾತನಾಡಿದ್ದಾರೆ.
“ಸಮಸ್ಯೆ, ಸೋಲು ಎಲ್ಲಾ ಚಿತ್ರರಂಗಗಳಲ್ಲೂ ಇದೆ. ಬಾಲಿವುಡ್ ಕಳೆದ ವರ್ಷದಿಂದ ಹೇಗೆ ಒದ್ದಾಡುತ್ತಿದೆ ಎಂದು ನಿಮಗೇ ಗೊತ್ತಿದೆ. ಏನು ಮಾಡಿದರೆ ಗೆಲುವು ಸಿಗಬಹುದು ಎಂಬ ಗೊಂದಲದಲ್ಲಿದೆ. ಪ್ರತಿ ಚಿತ್ರರಂಗದಲ್ಲೂ ಹಿಟ್ ಆದ ಸಿನಿಮಾಗಳು ಸದ್ದು ಮಾಡುತ್ತವೆ, ಜನ ಮಾತನಾಡುತ್ತಾರೆ. ಆದರೆ ನಮ್ಮಂತೆ ಅಲ್ಲೂ ಅನೇಕ ಸಿನಿಮಾಗಳು ಸೋತಿರುತ್ತವೆ. ಒಂದು ಜಾನರ್ ಹಿಟ್ ಆದರೆ ಅದೇ ಜಾನರ್‌ನ ಬೆನ್ನು ಬಿದ್ದಾಗ ಸೋಲು ಜಾಸ್ತಿ. ಎಲ್ಲರೂ ಅಡಕೆ ಬೆಳೆದರೆಂದು ನಾವೂ ಅದನ್ನೇ ಬೆಳೆಯುತ್ತೇವೆ. ಏಕಾಏಕಿ ಬೆಲೆ ಕುಸಿತವಾದಾಗ ಮತ್ತೆ ಟೆನ್ಷನ್. ಅದರ ಬದಲು ವೆರೈಟಿ ಪ್ರಯತ್ನಿಸಬೇಕು’ ಎಂದಿದ್ದರು.
ಮುಂದಿನ ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ವೆರೈಟಿ ಸಿನಿಮಾಗಳು ಬರಲಿವೆ. ಆ್ಯಕ್ಷನ್, ಲವ್‌ಸ್ಟೋರಿ, ಹಾರರ್, ಥ್ರಿಲ್ಲರ್, ಕಾಮಿಡಿ, ಸೆಂಟಿಮೆಂಟ್, ಫ್ಯಾಮಿಲಿ ಡ್ರಾಮಾ.. ಹಲವು ಬಗೆಯ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ತುದಿಗಾಲಿನಲ್ಲಿ ನಿಂತಿವೆ. ಅವೆಲ್ಲವನ್ನು ಪ್ರೇಕ್ಷಕರ ಜೊತೆ ಚಿತ್ರರಂಗದ ಮಂದಿ ಕೈ ಹಿಡಿದಿದರೆ ಗೆಲುವು ಸುಲಭವಾಗಬಹುದು