ನವದೆಹಲಿ/ಬೆಂಗಳೂರು: ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮಾರ್ಚ್ 22 ರಂದು ಘೋಷಣೆಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಅಂತಿಮವಾಗಿ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅಮಿತ್ ಶಾ , ಜೆ.ಪಿ ನಡ್ಡಾ ಅವರ ಜೊತೆ ಐದು ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದೇವೆ. ಈ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೂರನೇ ಪಟ್ಟಿ ಬಿಡುಗಡೆ ಬಳಿಕ ರಾಜ್ಯದ್ಯಾಂತ ಪ್ರವಾಸ ಆರಂಭಿಸುತ್ತೇವೆ
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆ.ಸಿ.ಮಾಧುಸ್ವಾಮಿ ಸಹಕಾರದಿಂದ ನಾವು ಚುನಾವಣೆ ಗೆಲ್ಲಬೇಕಿದೆ. ಕರಡಿ ಸಂಗಣ್ಣ ಜೊತೆಗೆ ಮಾತನಾಡಿದ್ದೇನೆ. ಅವರು ನಿಷ್ಠಾವಂತ ಮುಖಂಡರು. ಅವರು ಬೇರೆ ಯಾವ ನಿರ್ಧಾರ ತೆಗೆದುಕೊಳ್ಳಬಾರದು. ಮುಂದೆ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಾಗವುದು. ಅಸಮಾಧಾನಗೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಪ್ರಧಾನಿ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕು ಎಂದರು.
ಕಾಂಗ್ರೆಸ್ ನವರಿಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ. ಅದಕ್ಕೆ ಬಿಜೆಪಿ ಬಂಡಾಯ ನಾಯಕರನ್ನು ಸಂಪರ್ಕ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ಅರ್ಹ ವ್ಯಕ್ತಿಯೇ ಇಲ್ಲ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಅನುಕೂಲ ಆಗಿದೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಾಗುತ್ತೆ. ಅಮಿತ್ ಶಾ, ಮೋದಿ ಜೊತೆಗೆ ಹೆಚ್ಡಿ ದೇವೇಗೌಡರು ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಕೆ.ಎಸ್.ಈಶ್ವರಪ್ಪ ಅವರ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಎಲ್ಲ ನಾಯಕರು ಈಶ್ವರಪ್ಪ ಅವರ ಜೊತೆ ಮಾತನಾಡಿದ್ದಾರೆ. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿದ್ದೇನೆ. ತಮ್ಮ ಮಗನಿಗೆ ಸೀಟ್ ಸಿಗದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಸಮಿತಿಯಲ್ಲಿ ಎಲ್ಲ ನಿರ್ಧಾರ ಆಗುತ್ತೇವೆ. ಇದು ಬಿಎಸ್ ಯಡಿಯೂರಪ್ಪ ಅವರ ವೈಯಕ್ತಿಕ ನಿರ್ಧಾರವಲ್ಲ. 2-3 ಮೂರು ದಿನಗಳಲ್ಲಿ ಅವರಿಗೆ ಅರ್ಥ ಆಗಲಿದೆ. ಆಮೇಲೆ ಅವರೇ ಬರುತ್ತಾರೆ ಎಂದು ಹೇಳಿದರು.