ನವದೆಹಲಿ: ಉತ್ತರಾಖಂಡದ ಅಲ್ಮೋರಾ ಪಟ್ಟಣದ ನ್ಯಾಯಾಲಯದ ಸೂಚನೆಯ ಮೇರೆಗೆ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಮತ್ತು ಅವರ ಅಧೀನ ವೈವಿವಿಜೆ ರಾಜಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ .
ಮಾರ್ಚ್ 2 ರಂದು, ನ್ಯಾಯಾಲಯವು ಅಧಿಕಾರಿಗಳ ವಿರುದ್ಧ ಎನ್ ಜಿಒ, ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕಂದಾಯ ಪೊಲೀಸರಿಗೆ ಸೂಚಿಸಿತು.
ಫೆಬ್ರವರಿ 14ರಂದು ದಡಕಡ ಗ್ರಾಮದಲ್ಲಿ ಎನ್‌ಜಿಒ ನಡೆಸುತ್ತಿರುವ ಶಾಲೆಗೆ ಅಧಿಕಾರಿಗಳು ನಾಲ್ವರನ್ನು ಹಗರಣವೊಂದಕ್ಕೆ ಸಂಬಂಧಿಸಿದ ಕಡತ ಪರಿಶೀಲನೆ ಹೆಸರಿನಲ್ಲಿ ದಾಳಿಗೆ ಕಳುಹಿಸಿದ್ದು, ಕಡತಗಳನ್ನು ಕೊಂಡೊಯ್ದು ನಾಪತ್ತೆ ಮಾಡಿದ್ದಾರೆ ಎಂದು ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ಆರೋಪಿಸಿದೆ. ಅಲ್ಲದೆ ನಾಲ್ವರು ಅಧಿಕಾರಿಗಳು ಕಚೇರಿ ಕೊಠಡಿಯನ್ನು ಧ್ವಂಸಗೊಳಿಸಿದ್ದು ಜೊತೆಗೆ ಪೆನ್ ಡ್ರೈವ್ ಸೇರಿದಂತೆ ಹಲವು ಕಡತಗಳನ್ನು ಕೊಂಡೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಡೇಟಾ, ಡಾಕ್ಯುಮೆಂಟ್‌ಗಳು ಮತ್ತು ಪೆನ್ ಡ್ರೈವ್‌ಗಳು ಕುಮಾರ್ ಮತ್ತು ರಾಜಶೇಖರ್ ಅವರು “ವಂಚನೆಗಳಲ್ಲಿ” ಭಾಗವಹಿಸಿದ ಪುರಾವೆಗಳನ್ನು ಒಳಗೊಂಡಿವೆ ಎಂದು ಪಿಟಿಐ ವರದಿ ಮಾಡಿದೆ.
ವಿಜಿಲೆನ್ಸ್ ಇಲಾಖೆ ಮತ್ತು ಇತರ ವೇದಿಕೆಗಳಲ್ಲಿ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಕೈಬಿಡದಿದ್ದರೆ ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ನ ಅಧಿಕಾರಿಗಳನ್ನು ಬಂಧಿಸುವ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಅಧಿಕಾರಿಗಳು ತಂದಿರುವ ದಾಖಲೆ ಪತ್ರಗಳಿಗೆ ಸಹಿ ಹಾಕುವಂತೆ ತಮ್ಮನ್ನು ಬಲವಂತಪಡಿಸಿದ್ದಾರೆ ಇದಕ್ಕೆ ಒಪ್ಪದಿದ್ದಾಗ ಕಚೇರಿಯಲ್ಲಿದ್ದ 63,000 ರೂಪಾಯಿ ನಗದು ಜಪ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.