ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ (ಇಸಿಸಿಇ) ತರಗತಿಗಳು ಆರಂಭಿಸಿದ್ದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯ ಸಂಬಂಧ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ 3ರಂದು ವರಲಕ್ಷ್ಮಿ ಸೇರಿದಂತೆ ಹಲವರು ಗುಂಪುಗೂಡಿ ಕೆಕೆಆರ್‌ಡಿಬಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ರಸ್ತೆಯಿಂದ ಬೇರೆ ಕಡೆ ಹೋಗುವಂತೆ ಎಚ್ಚರಿಕೆ ನೀಡಿದರೂ ಅಲ್ಲಿಂದ ತೆರಳಲಿಲ್ಲ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ವರಲಕ್ಷ್ಮಿ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.