ಮನೆ ಕಾನೂನು ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳು ಎಫ್‌ಐಆರ್‌ನಲ್ಲಿವೆ: ಹೈಕೋರ್ಟ್‌

ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳು ಎಫ್‌ಐಆರ್‌ನಲ್ಲಿವೆ: ಹೈಕೋರ್ಟ್‌

0

ಬೆಂಗಳೂರಿನ ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಸಂಬಂಧ ದಾಖಲಿಸಿರುವ ದೂರು ಸಮರ್ಥನೀಯ ಎಂದಿರುವ ಕರ್ನಾಟಕ ಹೈಕೋರ್ಟ್ ಎಫ್‌ಐಆರ್‌ನಲ್ಲಿ ಮೇಲ್ನೋಟಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳಿವೆ ಎಂದು ಸೋಮವಾರ ಹೇಳಿದೆ.

Join Our Whatsapp Group

ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಮತ್ತು ಏಕ ಉದ್ದೇಶದಿಂದ ಅನೇಕ ಮಂದಿ ಸೇರಿ ಕ್ರಿಮಿನಲ್‌ ಕೃತ್ಯದಲ್ಲಿ ತೊಡಗಿರುವ ಆರೋಪದ ಮೇಲೆ ಮಾರತ್‌ಹಳ್ಳಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ನಿಖಿತಾ, ನಿಶಾ, ಅನುರಾಗ್‌ ಮತ್ತು ಸುಶೀಲ್‌ ಸಿಂಘಾನಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ವಿಚಾರಣಾಧೀನ ನ್ಯಾಯಾಲಯವು ಕಳೆದ ಶನಿವಾರ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಲು ಯಾವುದೇ ಅಂಶಗಳು ಇಲ್ಲ. ಆರೋಪಿಗಳನ್ನು ಬಂಧಿಸುವುದಕ್ಕೆ ಆಧಾರಗಳನ್ನೂ ಪೊಲೀಸರು ನೀಡಿಲ್ಲ. ಹೀಗಾಗಿ, ಪ್ರಕರಣ ರದ್ದುಪಡಿಸಬೇಕು” ಎಂದರು.

ಆಗ ಪೀಠವು “ಎಫ್‌ಐಆರ್‌ ಓದಿದರೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಎಲ್ಲಾ ಅಂಶಗಳು ಸ್ಪಷ್ಟವಾಗಿವೆ. ನನ್ನ ಪ್ರಕಾರ ಎಲ್ಲಾ ವಿವರಗಳನ್ನು ನೀಡಲಾಗಿದೆ. ಎಫ್‌ಐಆರ್‌ನಲ್ಲಿ ಇದಕ್ಕಿಂತ ಇನ್ನೂ ಹೆಚ್ಚಿನದನ್ನು ಏನು ಕೊಡಲಾಗುತ್ತದೆ?” ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

ಮುಂದುವರಿದು, ಸರ್ಕಾರವನ್ನು ಕುರಿತು “ತನಿಖೆ ನಡೆಯುತ್ತಿದೆಯೇ? ಏನೆಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ? ಡೆತ್‌ ನೋಟ್‌, ಆತ್ಮಹತ್ಯೆ ವಿಡಿಯೊ ಸಂಗ್ರಹಿಸಲಾಗಿದೆಯೇ?” ಎಂದು ಪ್ರಶ್ನಿಸಿತು.

ಇದಕ್ಕೆ ಸರ್ಕಾರದ ಪರ ವಕೀಲರು ತನಿಖೆ ಪ್ರಗತಿಯಲ್ಲಿದೆ ಎಂದರು. ಆಗ ಪೀಠವು “ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ಸಲ್ಲಿಸಬೇಕು. ಜೊತೆಗೆ ಆಕ್ಷೇಪಣೆ ಸಲ್ಲಿಸಬೇಕು” ಎಂದು ನಿರ್ದೇಶಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿತು.

ಕಳೆದ ತಿಂಗಳು 34 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ಅತುಲ್‌ ಅವರು ಸುದೀರ್ಘವಾದ ಮರಣ ಪತ್ರ ಹಾಗೂ ವಿಡಿಯೋ ಮಾಡಿ ಅದರಲ್ಲಿ ಪತ್ನಿ ನಿಖಿತಾ ಮತ್ತು ಆಕೆಯ ಕುಟುಂಬಸ್ಥರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಖಿತಾ, ನಿಶಾ, ಅನುರಾಗ್‌ ಸಿಂಘಾನಿಯಾಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.