ಬೆಂಗಳೂರು: ವಿಚ್ಛೇದನ ನೀಡಲು ಸಮ್ಮತಿಸದಿದ್ದರೆ ಖಾಸಗಿ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಪತ್ನಿಗೆ ಬೆದರಿಸಿದ್ದ ಪತಿಯ ವಿರುದ್ಧ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಹೆಣ್ಣೂರಿನ ನಿವಾಸಿ 43 ವರ್ಷದ ಸಂತ್ರಸ್ತೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ರಘುಪತಿ (49) ಹಾಗೂ ಆತನ ಪ್ರೇಯಸಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಹಾಗೂ ಆಕೆಯ ಪತಿ ರಘುಪತಿ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. 2007ರಲ್ಲಿ ಹಿರಿಯರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾಗಿ ಹೆಣ್ಣೂರಿನಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿವಾಹವಾದ ಆರಂಭದಲ್ಲಿ ದಂಪತಿ ಚೆನ್ನಾಗಿದ್ದರು. ನಂತರ ಪತಿ ಮದ್ಯಪಾನ ಮಾಡಿ ಪತ್ನಿಗೆ ಬೆದರಿಸಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ ನಡುವೆ 2011ರಲ್ಲಿ ಸಂತ್ರಸ್ತೆ ಕೆಲಸದ ನಿಮಿತ್ತ ಲಂಡನ್‌ಗೆ ತೆರಳಿದಾಗ ದುಡ್ಡಿಗೆ ಬೇಡಿಕೆಯಿಟ್ಟಿದ್ದ. ದುಡ್ಡು ಕೊಡದಿದ್ದರೆ ತಮ್ಮಿಬ್ಬರ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವು ದಾಗಿ ಬೆದರಿಸಿದ್ದ. 2021ರಿಂದ ಮಹಿಳೆಯೊಬ್ಬರ ಜೊತೆಗೆ ರಘುಪತಿ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಇತ್ತೀಚೆಗೆ ಈ ವಿಚಾರ ಸಂತ್ರಸ್ತೆಯ ಗಮನಕ್ಕೆ ಬಂದು ಪತಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಳು. “ನೀನು ದಪ್ಪವಾಗಿದ್ದಿಯಾ, ಹೀಗಾಗಿ ನನಗೆ ಆಕೆಯೇ ಬೇಕು. ವಿಚ್ಛೇದನ ನೀಡದಿದ್ದರೆ ತಮ್ಮ ನಡುವಿನ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ’ ಪತಿ ಮತ್ತೆ ಬೆದರಿಸುತ್ತಿದ್ದಾನೆ. ಕೆಲ ದಿನಗಳ ಹಿಂದೆ ನಾನು ಕೆಲಸಕ್ಕೆ ಹೊಗುತ್ತಿದ್ದಾಗ ಅಡ್ಡಗಟ್ಟಿ ವಿಚ್ಛೇದನ ನೀಡುವಂತೆ ಪೀಡಿಸಿದ್ದ. ಇಲ್ಲದಿದ್ದರೆ ನಿನ್ನ ತಲೆಯನ್ನು ಕಡೆದು ಕುಕ್ಕರ್‌ನಲ್ಲಿ ಬೇಯಿಸುತ್ತೇವೆ. ಮನೆಯ ಗ್ಯಾಸ್ ಸಿಲಿಂಡರ್ ಅನ್ನು ಬ್ಲಾಸ್ಟ್ ಮಾಡಿ ಸಾಯಿಸುವುದಾಗಿ ರಘುಪತಿ ಬೆದರಿಕೆ ಹಾಕು ತ್ತಿರು ವುದಾಗಿ ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ.