ಹೈದರಾಬಾದ್: ನಗರದ ಮದೀನಾ ವೃತ್ತದಲ್ಲಿರುವ ಅಬ್ಬಾಸ್ ಟವರ್ಸ್ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಮಳಿಗೆಗಳಿಗೆ ಹಾನಿಯಾಗಿದೆ ಎಂದು ಸೋಮವಾರ ವರದಿಯಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಯಾವುದೇ ಸಾವು–ನೋವು ಸಂಭವಿಸಿಲ್ಲ. ಆದರೆ, 40 ಮಳಿಗೆಗಳಿಗೆ ಹಾನಿಯಾಗಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದೆ.
ಅವಘಡದ ಬಗ್ಗೆ ತಡರಾತ್ರಿ 2.15ಕ್ಕೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ತೆಲಂಗಾಣ ಅಗ್ನಿ ದುರಂತ ತುರ್ತು ನಿರ್ವಹಣೆ ಮತ್ತು ನಾಗರಿಕ ರಕ್ಷಣಾ ಇಲಾಖೆ ಹೆಚ್ಚುವರಿ ನಿರ್ದೇಶಕ ಜಿ.ವಿ. ನಾರಾಯಣ ರಾವ್ ಅವರು ತಿಳಿಸಿದ್ದಾರೆ.
ಕಟ್ಟಡದಲ್ಲಿ ಸುಮಾರು 300 ಜವಳಿ ಮಳಿಗೆಗಳಿವೆ. ಸುಮಾರು 40 ಮಳಿಗೆಗಳಿಗೆ ಹಾನಿಯಾಗಿದೆ. ಕಟ್ಟಡದಲ್ಲಿ ಉಳಿದುಕೊಂಡಿದ್ದ ಭದ್ರತಾ ಸಿಬ್ಬಂದಿಯ ಕುಟುಂಬದವರು ಹಾಗೂ ಪಕ್ಕದ ಕಟ್ಟಡದ ಇತರ 12 ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.














