ಸಕಲೇಶಪುರ: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ತಾಲೂಕಿನ ಶಿರಾಡಿ ಘಾಟ್ ರಸ್ತೆಯ, ಎತ್ತಿನಹಳ್ಳ ಬಳಿ ಜ.2ರ ಗುರುವಾರ ಮುಂಜಾನೆ ನಡೆದಿದೆ.
ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಸ್ಲೀಪಿಂಗ್ ಕೋಚ್ ಎಸಿ ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ತೆರಳುವಾಗ ಬಸ್‌ನ ಇಂಜಿನ್‌ನಲ್ಲಿ ಬೆಂಕಿ ಕಾಣಸಿಕೊಂಡಿದೆ. ತಕ್ಷಣವೇ ಬಸ್ ನಿಲ್ಲಿಸಿದ ಚಾಲಕ ಯೋಗೀಶ್ ಪ್ರಯಾಣಿಕರನ್ನು ಕೆಳಗಿಸಿದ್ದಾನೆ. ನಂತರ ಇಡೀ ಬಸ್‌ಗೆ ಬೆಂಕಿ ವ್ಯಾಪಿಸಿದ್ದು, ರಸ್ತೆಯಲ್ಲಿಯೇ ಧಗಧಗಿಸಿ ಹೊತ್ತಿ ಉರಿದಿದೆ.
ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತೆರಳಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಖಾಸಗಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಬೇರೆ ವಾಹನದಲ್ಲಿ ತೆರಳಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.














