ಮನೆ ಶಿಕ್ಷಣ ಕಲಬುರ್ಗಿಯ ಶಿಕ್ಷಣ ಇಲಾಖೆಯ ಗೋದಾಮಿಗೆ ಬೆಂಕಿ, ಕೋಟ್ಯಂತರ ರೂ. ಮೌಲ್ಯದ ಪಠ್ಯಪುಸ್ತಕಗಳು ಭಸ್ಮ!

ಕಲಬುರ್ಗಿಯ ಶಿಕ್ಷಣ ಇಲಾಖೆಯ ಗೋದಾಮಿಗೆ ಬೆಂಕಿ, ಕೋಟ್ಯಂತರ ರೂ. ಮೌಲ್ಯದ ಪಠ್ಯಪುಸ್ತಕಗಳು ಭಸ್ಮ!

0

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಆಳಂದ್ ಪಟ್ಟಣದಲ್ಲಿ ಭಾರೀ ಅಗ್ನಿ ಅವಘಡವೊಂದು ಸಂಭವಿಸಿದ್ದು, ಶಿಕ್ಷಣ ಇಲಾಖೆಯ ಪಠ್ಯಪುಸ್ತಕಗಳ ಗೋದಾಮಿಗೆ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪುಸ್ತಕಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಈ ದುರಂತದಲ್ಲಿ ಒಂದು ಕೋಣೆಯಲ್ಲಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ಪಠ್ಯಪುಸ್ತಕಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾದವು. ಬೆಂಕಿಯಿಂದ ಅಂದಾಜು ಸುಮಾರು 1 ಕೋಟಿ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಇನ್ನೊಂದು ಕೋಣೆಯಲ್ಲಿ ಸಂಗ್ರಹಿಸಿದ್ದ ಪುಸ್ತಕಗಳನ್ನು ಅಧಿಕಾರಿಗಳು ರಕ್ಷಿಸಲು ಯಶಸ್ವಿಯಾಗಿದ್ದಾರೆ.

ಅಗ್ನಿ ಅವಘಡದ ಸಂದರ್ಭದಲ್ಲಿ ಗೋದಾಮಿನಲ್ಲಿ 4ನೇ ತರಗತಿಯಿಂದ 8ನೇ ತರಗತಿಯವರೆಗೆ ವಿವಿಧ ಸರ್ಕಾರಿ ಶಾಲೆಗಳಿಗೆ ವಿತರಿಸಲು ಇಟ್ಟಿದ್ದ ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು ಹಾಗೂ ಶೈಕ್ಷಣಿಕ ದಾಖಲೆಗಳು ಇದ್ದವು. ಈ ಅವಘಡವು ಮುಂಬರುವ ಶಾಲಾ ವರ್ಷದ ಆರಂಭಕ್ಕೆ ತೀವ್ರ ಆಘಾತ ನೀಡುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡದ ಮೂಲ ಕಾರಣವನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ.

ಅಗ್ನಿ ಅನಾಹುತದ ತಕ್ಷಣವೇ ಸ್ಥಳೀಯರು ಮತ್ತು ಸಿಬ್ಬಂದಿಯು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳವು ಬೆಂಕಿ ನಂದಿಸಲು ಹರಸಾಹಸಪಟ್ಟಿತು. ಆದರೆ ಬೆಂಕಿಯ ತೀವ್ರತೆಯಿಂದಾಗಿ ಬಹುಪಾಲು ಪುಸ್ತಕಗಳು ಅದಾಗಲೇ ಸುಟ್ಟು ಹೋಗಿದ್ದವು. ಅಗ್ನಿ ನಂದಿಸುವ ಕಾರ್ಯವು ಹಲವು ಗಂಟೆಗಳ ಕಾಲ ನಡೆದಿದ್ದು, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ.

ಈ ಅಗ್ನಿ ಅವಘಡದ ಪರಿಣಾಮವಾಗಿ, ಶಾಲಾ ಮಕ್ಕಳಿಗೆ ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ ಪಠ್ಯಪುಸ್ತಕಗಳ ಕೊರತೆಯ ಸಮಸ್ಯೆ ಆಗುವ ಸಾಧ್ಯತೆ ಇದೆ.