ದಾಂಡೇಲಿ(Dandeli): ನಗರದ ಸಮೀಪ ಅಂಬೇವಾಡಿಯಲ್ಲಿನ ಮರದ ಪೀಠೋಪಕರಣ ತಯಾರಿಕೆ ಹಾಗೂ ಮಾರಾಟ ಮಳಿಗೆಯಲ್ಲಿ ಶುಕ್ರವಾರ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಹಾನಿ ಉಂಟಾಗಿದೆ.
ಉದಯ ನಾಯ್ಕ ಮಾಲೀಕತ್ವದ ವುಡ್’ಲ್ಯಾಂಡ್ ಪೀಠೋಪಕರಣಗಳ ಮಳಿಗೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿ ಇದ್ದ ಎಲ್ಲಾ ಪೀಠೋಪಕರಣಗಳು ಬೆಂಕಿಗೆ ಆಹುತಿ ಆಗಿದ್ದು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ತಡರಾತ್ರಿ ಜೋರಾಗಿ ಮಳೆ ಬಂದು, ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿರುವ ಎನ್ನುವ ಶಂಕೆ ವ್ಯಕ್ತವಾಗಿದೆ. ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯ ಅಗ್ನಿಶಾಮಕ ದಳ, ಹಳಿಯಾಳದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾದರು.
ಬೆಳಗಿನ ಜಾವದವರೆಗೂ ಬೆಂಕಿ ಸಂಪೂರ್ಣ ಹತೋಟಿಗೆ ಬರಲಿಲ್ಲ.ಮಳಿಗೆಯಲ್ಲಿ ಇದ್ದ ಸಾಗವಾನಿ, ಹೊನ್ನೆ, ಬೀಟೆ, ಕರಿಮತ್ತೆ ಮುಂತಾದ ಬೆಲೆಬಾಳುವ ಮರಗಳ ಪೀಠೋಪಕರಣ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಕ್ಕಪಕ್ಕದ ಕೆಲವು ಅಂಗಡಿಗಳಿಗೂ ಬೆಂಕಿ ತಾಗಿದ್ದು ಆಲ್ಪಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ಪಿಎಸ್ಐ ಕೃಷ್ಣ ಗೌಡ ಹರಿಕೇರಿ, ಹೆಸ್ಕಾಂ ಸಿಬ್ಬಂದಿ ಸ್ಥಳದಲ್ಲಿ ಬೆಂಕಿ ನಂದಿಸಲು ಸಹಕರಿಸುತ್ತಿದ್ದಾರೆ.
ಘಟನೆಯ ಸ್ಥಳದಲ್ಲಿ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.