ಮನೆ ರಾಷ್ಟ್ರೀಯ ಎಜ್ರಾ ಸ್ಟ್ರೀಟ್‌ ಬಳಿ ಬೆಂಕಿ ಅವಘಡ – ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡು

ಎಜ್ರಾ ಸ್ಟ್ರೀಟ್‌ ಬಳಿ ಬೆಂಕಿ ಅವಘಡ – ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡು

0

ಕೋಲ್ಕತ್ತಾ : ವಿದ್ಯುತ್ ಉಪಕರಣಗಳನ್ನು ಸಂಗ್ರಹಿಸಿಡುತ್ತಿದ್ದ ಗೋಡೌನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಭಾರೀ ಅವಘಡ ಸಂಭವಿಸಿರುವ ಘಟನೆ ಕೋಲ್ಕತ್ತಾದ 26ನೇ ಎಜ್ರಾ ಸ್ಟ್ರೀಟ್‌ನಲ್ಲಿ ನಡೆದಿದೆ.

ಇಂದು (ಶನಿವಾರ) ವಿದ್ಯುತ್ ಉಪಕರಣಗಳನ್ನು ಸಂಗ್ರಹಿಸಿಡುತ್ತಿದ್ದ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಲೇ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ಆವರಿಸಿಕೊಂಡಿದೆ. ಜೊತೆಗೆ ದಟ್ಟ ಹೊಗೆ ಆವರಿಸಿಕೊಂಡಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ 20 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇನ್ನೂ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದ್ದರಿಂದ ಆ ಸಮಯದಲ್ಲಿ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಹೀಗಾಗಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪಶ್ಚಿಮ ಬಂಗಾಳ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ರಣವೀರ್ ಕುಮಾರ್ ಮಾತನಾಡಿ, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ವಿದ್ಯುತ್ ಸಾಮಗ್ರಿಗಳಿರುವುದರಿಂದ ಬೃಹತ್ ಹೊಗೆ ಆವರಿಸಿದೆ ಎಂದಿದ್ದಾರೆ. ಇನ್ನೂ ಸ್ಥಳೀಯರು ಅಗ್ನಿಶಾಮಕ ದಳ ಸ್ಥಳಕ್ಕೆ ತಡವಾಗಿ ಬಂದಿದೆ, ಹೀಗಾಗಿ ಬೆಂಕಿ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅಂಗಡಿ ಮಾಲೀಕರು, ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ, ಬೆಂಕಿ ನಿಯಂತ್ರಿಸುವಲ್ಲಿ ತೊಡಗಿಕೊಂಡರು. ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೃಹತ್‌ ಹೊಗೆ ಆವರಿಸಿಕೊಂಡಿರುವುದು ಕಂಡುಬಂದಿದೆ. ದೂರದಿಂದಲೇ ದಟ್ಟ ಹೊಗೆ ಕಾಣಿಸಿದ್ದು, ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.