ಕಾಸರಗೋಡು: ದೇವಸ್ಥಾನದ ಉತ್ಸವದ ವೇಳೆ ಪಟಾಕಿ ಸಿಡಿದು ನಡೆದ ಅವಘಡದಲ್ಲಿ ಸುಮಾರು 150 ಕ್ಕೂ ಮಂದಿ ಗಾಯಗೊಂಡು ಎಂಟು ಮಂದಿಯ ಸ್ಥಿತಿ ಗಂಭೀರವಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಬಳಿಯ ದೇವಸ್ಥಾನದಲ್ಲಿ ಸೋಮವಾರ(ಅ.28) ತಡರಾತ್ರಿ ಸಂಭವಿಸಿದೆ.
ಸೋಮವಾರ ತಡರಾತ್ರಿ ಸುಮಾರು 12.30 ರ ವೇಳೆಗೆ ಅಂಜುತಂಬಲಂ ವೀರರ್ಕಾವು ದೇವಸ್ಥಾನದಲ್ಲಿ ವಾರ್ಷಿಕ ಕಲಿಯಾಟಂ ಉತ್ಸವ ನಡೆಯುತ್ತಿತ್ತು ಈ ವೇಳೆ ಪಟಾಕಿ ಸಿಡಿಸಲಾಗಿದೆ ಈ ಸಂದರ್ಭದಲ್ಲಿ ಪಟಾಕಿಯ ಕಿಡಿ ದೇವಸ್ಥಾನದ ಬಳಿ ಇರುವ ಪಟಾಕಿ ಗೋಡಾನ್ ಗೆ ತಗುಲಿ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗಾಯಗೊಂಡವರನ್ನು ಕಾಸರಗೋಡು, ಕಣ್ಣೂರು, ಮಂಗಳೂರು ಸೇರಿದಂತೆ ವಿವಿದೆಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಇದರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅವಘಡ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.