ಮಂಗಳೂರು: ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಿಂದ ಮೂವರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಯ್ಯದ್ ಬಶೀರ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ವೇಣೂರಿನಿಂದ ಪರಾರಿಯಾಗುತ್ತಿದ್ದಾಗ ಸುಳ್ಯದಲ್ಲಿ ಬಶೀರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಅಜ್ಞಾತಸ್ಥಳದಲ್ಲಿ ಬಶೀರ್ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಸ್ಥಳಕ್ಕೆ ತಡರಾತ್ರಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆದಿದೆ.
ಸ್ಪೋಟಗೊಂಡ ಗೋದಾಮಿನ ಪಕ್ಕದಲ್ಲಿ ಮನೆಯೊಂದು ಇದೆ. ಈ ಮನೆಯಲ್ಲಿ ವೃದ್ಧ ದಂಪತಿ ವಾಸವಾಗಿದ್ದಾರೆ. ರವಿವಾರ (ಜ.28) ಸ್ಪೋಟಗೊಂಡ ಸಮಯದಲ್ಲಿ ವೃದ್ಧ ದಂಪತಿ ಮನೆಯ ಹೊರಗಡೆ ಕೂತು ಚಹಾ ಕುಡಿಯುತ್ತಿದ್ದರು. ಈ ವೇಳೆ ಗೋದಾಮಿನಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದ ತೀರ್ವತೆಗೆ ವೃದ್ಧ ದಂಪತಿಯ ಮನೆ ಕೂಡ ಕುಸಿದು ಬಿದ್ದಿದೆ. ಅದೃಷ್ಟವಶಾತ್ ದಂಪತಿ ಹೊರಗಡೆ ಇದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಸ್ಫೋಟದ ತೀರ್ವತೆಗೆ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದ್ದು, ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಛಾವಣಿಯ ಶೀಟ್ ಗಳು ತುಂಡು ತುಂಡಾಗಿ ಮುರಿದು ಕೆಳಗೆ ಬಿದ್ದಿವೆ.
ಒಟ್ಟು ಐದು ಬಾರಿ ಸ್ಫೋಟ ಸಂಭವಿಸಿತು. ಸ್ಫೋಟ ಆಗುತ್ತಿದ್ದಂತೆಯೇ ಕಣ್ಣು ಮಂಜಾಯಿತು. ಮನೆಯ ಶೀಟ್ ಗಳು ಮುರಿದು ಕೆಳಗೆ ಬಿದ್ದವು. ಮನೆ ಜಖಂಗೊಂಡಿದೆ. ಈ ಹಿನ್ನೆಲೆಯಲ್ಲಿ ಸರಕಾರ ಪರಿಹಾರ ನೀಡಬೇಕು ಎಂದು ವೃದ್ಧ ದಂಪತಿ ಆಗ್ರಹಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ 9 ಜನ ಕಾರ್ಮಿಕರು ಬಂದು ಕೆಲಸ ಮಾಡುತ್ತಿದ್ದರು. ಯಾರನ್ನೂ ಗೋದಾಮಿನ ಹತ್ತಿರ ಬಿಡದೆ, ರೋಡ್ ನಲ್ಲಿ ವಾಚ್ ಮಾಡುತ್ತಾ ಕೆಲಸ ಮಾಡುತ್ತಿದ್ದರು. ಇಲ್ಲಿ ಪಟಾಕಿ ತಯಾರಿಸುವುದಾಗಿ ಬಶೀರ್ ಲೈಸೆನ್ಸ್ ತೆಗೆದುಕೊಂಡಿದ್ದನು. ಅದರೆ ಇಲ್ಲಿ ಬಾಂಬ್ ತಯಾರು ಮಾಡುತ್ತಿದ್ದರು ಅಂತ ಸ್ಥಳೀಯರು ಅನುಮಾನ ವ್ಯಕ್ತ ಪಡಿಸಿದ್ದಾರೆ.