ಭುವನೇಶ್ವರ: ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ ಗುಂಡಿನ ದಾಳಿಯಿಂದಾಗಿ ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಮೃತಪಟ್ಟಿದ್ದಾರೆ.
ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್ನ ಗಾಂಧಿ ಚೌಕ ಎಂಬಲ್ಲಿ ಭಾನುವಾರ ಮಧ್ಯಾಹ್ನ ನಬಾ ಕಿಶೋರ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಸಹಾಯಕ ಪೊಲೀಸ್ ಸಬ್ ಇನ್ಸ್’ಪೆಕ್ಟರ್ (ಎಎಸ್’ಐ) ಗೋಪಾಲ್ ಚಂದ್ರ ದಾಸ್ ಅವರು ಸಚಿವರ ಎದೆಗೆ ಗುಂಡು ಹಾರಿಸಿದ್ದಾರೆ.
ನಬಾ ದಾಸ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾರಿನಿಂದ ಕೆಳಗಿಳಿಯುವಾಗ ಈ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಚಿವರ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ಸ್ಥಳೀಯರೇ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಬಂಧಿತ ಅಧಿಕಾರಿ ಸಚಿವರ ಮೇಲೆ ಗುಂಡು ಹಾರಿಸಿದ್ದು ಏಕೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಸಚಿವ ಕಿಶೋರ್ ದಾಸ್ ಅವರು ಈ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಝರ್ಸುಗುಡಾದ ದೊಡ್ಡ ಕಲ್ಲಿದ್ದಲು ಗಣಿ ಉದ್ಯಮಿಗಳಲ್ಲಿ ಮೊದಲ ಸಾಲಿನಲ್ಲಿ ಇರುವ ಕಿಶೋರ್ ದಾಸ್ ಅವರು, 2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಡಿ ಸೇರಿದ್ದರು. ಅಲ್ಲಿಯವರೆಗೆ ಅವರು ಬಿಜೆಡಿಯ ಕಟುಟೀಕಾರರಾಗಿದ್ದರು.