ಶ್ರೀನಗರ: ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿರುವ ಘಟನೆ ಜಮ್ಮು ಕಾಶ್ಮೀರದ ಅಖ್ನೂರ್ ಸೆಕ್ಟರ್ ನಲ್ಲಿ ಸೋಮವಾರ(ಅ.28) ಮುಂಜಾನೆ ನಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನದ ಗಡಿಗೆ ಸಮೀಪವಿರುವ ಅಖ್ನೂರ್ ಸೆಕ್ಟರ್‌ನಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಸೇನೆ ಸೋಮವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಿದೆ. ಸೇನಾ ವಾಹನ ಗಡಿ ಪ್ರದೇಶ ತಲುಪುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ, ಪರಿಣಾಮ ಸೇನೆಯೂ ಪ್ರತಿದಾಳಿ ನಡೆಸಿದ್ದು ಈ ವೇಳೆ ಉಗ್ರರ ತಂಡ ಅರಣ್ಯ ಪ್ರದೇಶದೊಳಗೆ ಪ್ರವೇಶಿಸಿದ್ದು ಸೇನಾ ಪಡೆ ಕಾರ್ಯಾಚರಣೆ ಮುಂದುವರೆಸಿದೆ ಎಂದು ಹೇಳಲಾಗಿದೆ ಅಲ್ಲದೆ ಗುಂಡಿನ ಚಕಮಕಿಯಲ್ಲಿ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ, ಸದ್ಯ ಅಖ್ನೂರ್ ಸೆಕ್ಟರ್ ಪ್ರದೇಶವನ್ನು ಪೊಲೀಸರು ಹಾಗೂ ಸೇನಾಪಡೆ ಸುತ್ತುವರೆದಿದ್ದು ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗಿದೆ.
ದೀಪಾವಳಿ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಲ್ಲಿ ಉಗ್ರರು ಒಳನುಸುಳುವ ಸಂಭವ ಹೆಚ್ಚಾಗಿರುವುದರಿಂದ ಗಡಿ ಭಾಗದಲ್ಲಿ ಕಾರ್ಯಾಚರಣೆ ಹೆಚ್ಚಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ, ವಿಶೇಷವಾಗಿ ಕಣಿವೆಯಲ್ಲಿ ನಡೆದ ಅನೇಕ ಗುಂಡಿನ ಚಕಮಕಿಗಳಲ್ಲಿ ಇಬ್ಬರು ಸೈನಿಕರು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 24 ರಂದು, ಬಾರಾಮುಲ್ಲಾದ ಗುಲ್ಮಾರ್ಗ್ ಬಳಿ ಭಯೋತ್ಪಾದಕರು ಸೇನಾ ವಾಹನದ ಮೇಲೆ ಹೊಂಚುದಾಳಿ ನಡೆಸಿದ ಪರಿಣಾಮ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಅಕ್ಟೋಬರ್ 20 ರಂದು ಗಂಡರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ನ ನಿರ್ಮಾಣ ಹಂತದ ಕಟ್ಟಡ ಬಳಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ವೈದ್ಯ ಮತ್ತು ಆರು ಮಂದಿ ವಲಸೆ ಕಾರ್ಮಿಕರು ಸೇರಿದಂತೆ ಏಳು ಜನರನ್ನು ಕೊಲ್ಲಲಾಗಿತ್ತು. ಈ ಘಟನೆಗೆ ಎರಡು ದಿನಗಳ ಮೊದಲು ಬಿಹಾರದ ಮತ್ತೊಬ್ಬ ವಲಸೆ ಕಾರ್ಮಿಕನ ಮೇಲೆ ದಾಳಿ ನಡೆಸಲಾಗಿತ್ತು. ಈ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ, ಅಕ್ಟೋಬರ್ 24 ರಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು.