ತಿರುವನಂತಪುರಂ (Thiruvananthapuram): ಐರೋಪ್ಯ ರಾಷ್ಟ್ರಗಳಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಿದೆ. ದೇಶದಲ್ಲಿಯೇ ಮೊದಲ ಪ್ರಕರಣ ಕೇರಳದಲ್ಲಿ ದಾಖಲಾಗಿದೆ.
ದುಬೈನಿಂದ ತಿರುವನಂತಪುರಂಗೆ ಜುಲೈ 12ರಂದು ಆಗಮಿಸಿದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಸೋಂಕು ತಗುಲಿದೆ. ಸದ್ಯಕ್ಕೆ ಸೋಂಕು ತಗುಲಿದ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮಾರ್ಗಸೂಚಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಕೇಂದ್ರ ಸರ್ಕಾರ ಮಂಕಿಪಾಕ್ಸ್ ಸೋಂಕನ್ನು ಗಂಭೀರವಾಗಿ ಪರಿಗಣಿಸಿದ್ದು, ಬಹುಶಿಸ್ತೀಯ ಕೇಂದ್ರೀಯ ತಂಡವನ್ನು ಕೇರಳಕ್ಕೆ ಕಳುಹಿಸಲು ತೀರ್ಮಾನಿಸಿದೆ. ಈಗಾಗಲೇ ಎಲ್ಲ ರಾಜ್ಯಗಳಿಗೆ ಸೋಂಕಿನ ಕುರಿತು ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ.
ಕಾಡು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ವೈರಸ್ ಇದಾಗಿದ್ದು, ಜಗತ್ತಿನ 63 ರಾಷ್ಟ್ರಗಳ 9,200ಕ್ಕೂ ಜನರಿಗೆ ಇದುವರೆಗೆ ತಗುಲಿದೆ.
ಲಕ್ಷಣಗಳು:
ಇದರ ಆರಂಭಿಕ ಲಕ್ಷಣಗಳೆಂದರೆ ಜ್ವರ, ತಲೆನೋವು, ಊತ, ಬೆನ್ನು ನೋವು, ಸ್ನಾಯು ನೋವು ಮತ್ತು ಸಾಮಾನ್ಯ ಆಲಸ್ಯ. ಜ್ವರ ಬಿಟ್ಟ ನಂತರ, ದೇಹದಾದ್ಯಂತ ದದ್ದು ಏಳಬಹುದು. ಈ ದದ್ದುಗಳು ಸಾಮಾನ್ಯವಾಗಿ ಮುಖದ ಮೇಲೆ ಪ್ರಾರಂಭವಾಗುತ್ತದೆ. ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಸಾಮಾನ್ಯವಾಗಿ ಅಂಗೈಗಳು ಮತ್ತು ಪಾದಗಳ ಅಡಿಭಾಗದಲ್ಲಿ ದದ್ದುಗಳು ಏಳುತ್ತವೆ. ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಜತೆ ಸಂಪರ್ಕಕ್ಕೆ ಬಂದ ವ್ಯಕ್ತಿಗೂ ಸೋಂಕು ಹರಡಬಹುದು.
ಹೇಗೆ ಹರಡುತ್ತದೆ
ಈ ವೈರಸ್ ಚರ್ಮ, ಉಸಿರಾಟದ ಮಾರ್ಗ ಅಥವಾ ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಬಹುದು. ಇದು ಮಂಗಗಳು, ಇಲಿಗಳು ಮತ್ತು ಅಳಿಲುಗಳಂತಹ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ. ಸೋಂಕಿತ ವ್ಯಕ್ತಿ ಬಳಸಿದ ಹಾಸಿಗೆ ಮತ್ತು ಬಟ್ಟೆಯನ್ನು ಸ್ವಚ್ಛಗೊಳಿಸದೆ ಬಳಸಿದರೂ ವೈರಸ್ ಹರಡುವ ಸಾಧ್ಯತೆ ಇದೆ.














