ಮನೆ ಸುದ್ದಿ ಜಾಲ ದೇಶದ ಮೊದಲ ತೃತೀಯ ಲಿಂಗಿಗಳ ಒಪಿಡಿ

ದೇಶದ ಮೊದಲ ತೃತೀಯ ಲಿಂಗಿಗಳ ಒಪಿಡಿ

0

ನವದೆಹಲಿ: ಸಮಾಜದ ನಿರ್ಲಕ್ಷ್ಯ ಮತ್ತು ಅಸಡ್ಡೆಗೆ ಗುರಿಯಾಗಿರುವ ತೃತೀಯ ಲಿಂಗಿಗಳಿಗಾಗಿ ಇಲ್ಲಿನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಹೊರರೋಗಿ ವಿಭಾಗ(ಒಪಿಡಿ)ವನ್ನು ಇಂದು ಆರಂಭಿಸಲಾಯಿತು. ಇದು ದೇಶದ ಮೊದಲ ತೃತೀಯ ಲಿಂಗಿಗಳ ಒಪಿಡಿಯಾಗಿದೆ. ಆರ್ಎಂಎಲ್ ಆಸ್ಪತ್ರೆಯ ನಿರ್ದೇಶಕ ಪ್ರೊಫೆಸರ್ ಡಾ. ಅಜಯ್ ಶುಕ್ಲಾ ಅವರು ಒಪಿಡಿಯನ್ನು ಉದ್ಘಾಟಿಸಿದರು. ಇದರ ಬಳಿಕ ಹಲವಾರು ತೃತೀಯ ಲಿಂಗಿಗಳು ಕೌಂಟರ್ನಲ್ಲಿ ಟಿಕೆಟ್ ಪಡೆದುಕೊಂಡು ಆರೋಗ್ಯ ತಪಾಸಣೆಗೆ ಒಳಪಟ್ಟರು.

ಉದ್ಘಾಟನೆಯ ಬಳಿಕ ಮಾತನಾಡಿ ಡಾ. ಅಜಯ್ ಶುಕ್ಲಾ ಅವರು, ತೃತೀಯ ಲಿಂಗಿಗಳು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯ ಸೇವೆ ಪಡೆದುಕೊಳ್ಳಲು ತೃತೀಯ ಲಿಂಗಿಗಳು ಪಡುತ್ತಿರುವ ತೊಂದರೆಗಳನ್ನು ಕಂಡು ಅವರಿಗಾಗಿಯೇ ಪ್ರತ್ಯೇಕ ಒಪಿಡಿಯನ್ನು ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ಆರೋಗ್ಯ ಸೇವೆಯ ವಿಭಾಗವನ್ನು ಆರಂಭಿಸಿರುವುದು ಸಂತಸ ತಂದಿದೆ ಎಂದರು.

ಅಸ್ವಸ್ಥತೆ ಮತ್ತು ತಾರತಮ್ಯದ ಭಯದಿಂದಾಗಿ ಆಸ್ಪತ್ರೆಗೆ ತೃತೀಯ ಲಿಂಗಿಗಳು ಬರುವುದೇ ಕಡಿಮೆಯಾಗಿತ್ತು. ಇದನ್ನು ಆಡಳಿತ ಮಂಡಳಿ ಪರಿಗಣಿಸಿ, ಅವರಿಗಾಗಿಯೇ ಪ್ರತ್ಯೇಕ ಆರೋಗ್ಯ ತಪಾಸಣಾ ವಿಭಾಗವನ್ನು ಆರಂಭಿಸಲು ಉದ್ದೇಶಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ವಿಶೇಷ ಒಪಿಡಿಯನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

ವಿಶೇಷತೆಗಳೇನು?: ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಟ್ರಾನ್ಸ್ಜೆಂಡರ್ಗಳಿಗಾಗಿ ಆರಂಭಿಸಲಾಗಿರುವ ಪ್ರತ್ಯೇಕ ಆರೋಗ್ಯ ತಪಾಸಣಾ ವಿಭಾಗವು ಹಲವು ವಿಶೇಷಗಳಿಂದ ಕೂಡಿದೆ. ಇಲ್ಲಿ ತೃತೀಯ ಲಿಂಗಿಗಳಿಗೆ ಮಾತ್ರ ಅವಕಾಶವಿರುತ್ತದೆ. ಸಾಮಾನ್ಯ ರೋಗಿಗಳಿಗೆ ಇಲ್ಲಿ ತಪಾಸಣೆ ನಡೆಸಲಾಗುವುದಿಲ್ಲ. ಇಲ್ಲಿ ಟ್ರಾನ್ಸ್ಜೆಂಡರ್ ರೋಗಿಗಳಿಗಾಗಿಯೇ ಮೀಸಲಾದ ವಿಶ್ರಾಂತಿ ಕೊಠಡಿ ಇರುತ್ತದೆ. ಅವರಿಗಿರುವ ರೋಗಗಳಿಂದ ಇತರ ರೋಗಿಗಳೊಂದಿಗೆ ಸೇರುವ ಮುಜುಗರವನ್ನು ತಪ್ಪಿಸಲು ಪ್ರತ್ಯೇಕ ಚಿಕಿತ್ಸಾ ವಿಭಾಗವೂ ಇಲ್ಲಿರಲಿದೆ.

ತೃತೀಯಲಿಂಗಿಗಳು ಖುಷ್: ಆರ್ಎಂಎಲ್ ಆಸ್ಪತ್ರೆಯಲ್ಲಿ ತಮಗಾಗಿ ಪ್ರತ್ಯೇಕ ವಿಭಾಗವನ್ನು ಆರಂಭಿಸಿದ್ದಕ್ಕೆ ತೃತೀಯಲಿಂಗಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆಸ್ಪತ್ರೆ ಆಡಳಿತ ಮಂಡಳಿಗೆ ಧನ್ಯವಾದ ಹೇಳಿದ್ದಾರೆ. ಆಸ್ಪತ್ರೆಯ ನಡೆಯಿಂದಾಗಿ ನಾವು ಸಂತೋಷಗೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ನಮಗೆ ವಿಶೇಷ ಉಡುಗೊರೆ ನೀಡಲಾಗಿದೆ. ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದೆವು. ಈಗ ಯಾವುದೇ ಮುಜುಗರವಿಲ್ಲದೇ ತಪಾಸಣೆಗೆ ಬರಬಹುದು ಎಂದು ಮಂಗಳಮುಖಿಯರು ಅಭಿಪ್ರಾಯ ಹಂಚಿಕೊಂಡರು.

ತೃತೀಯಲಿಂಗಿಗಳ ಒಪಿಡಿ ಉದ್ಘಾಟನೆಯ ಜೊತೆಗೆ ಆರ್ಎಂಎಲ್ ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಆರ್ಎಂಎಲ್ ಆಸ್ಪತ್ರೆಯ ವಿಶೇಷ ನಡೆಯು ಮೆಚ್ಚುಗೆ ಗಳಿಸಿದ್ದಲ್ಲದೇ, ರಾಷ್ಟ್ರದಾದ್ಯಂತ ಇದೇ ರೀತಿಯ ಪ್ರಯತ್ನಗಳಿಗೆ ಪ್ರೇರೇಪಣೆ ನೀಡಲಿದೆ.