ಮೈಸೂರು(Mysuru): ಆರೋಗ್ಯ ದಸರಾ ಐತಿಹಾಸಿಕ ಕಾರ್ಯಕ್ರಮವಾಗಿದ್ದು ನಾವು ಇಂದು ಹೆಮ್ಮೆಯಿಂದ ಉದ್ಘಾಟನೆ ಮಾಡಿದ್ದೇವೆ ಆರೋಗ್ಯ ದಸರಾ ಎಂಬ ಆಲೋಚನೆ ಇತಿಹಾಸದಲ್ಲೇ ಮೊದಲ ಬಾರಿಗೆ ಆಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಇಂದು ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಆರೋಗ್ಯ ದಸರಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಗತವೈಭವದ ನಾಡಹಬ್ಬ ಆಚರಣೆಯಾಗುತ್ತಿದೆ. ದೇಶದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ರವರು ಮತ್ತು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ದಸರಾಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ದಸರಾವೆಂಬ ಆಲೋಚನೆ ನಾವು ಕೋವಿಡ್ ದಿನಗಳಲ್ಲಿ ಎದುರಿಸಿದ ಸವಾಲುಗಳಿಂದ ಬಂದಿದ್ದು, ಅದರ ಅರಿವು ಮೂಡಿಸುವ ಕಾರ್ಯ ದಸರಾದಲ್ಲಿ ಆಗಬೇಕೆಂಬ ಉದ್ದೇಶದಿಂದ ಆರೋಗ್ಯ ದಸರಾವನ್ನು ನಡೆಸಲಾಗುತ್ತಿದೆ.
ಮೈಸೂರು ನಗರವನ್ನು ಯೋಗ ನಗರವೆಂದರೆ ತಪ್ಪಾಗಲಾರದು. ಜೂನ್ 21 ವಿಶ್ವ ಯೋಗ ದಿನ ಆಚರಣೆ ಮಾಡಬೇಕೆಂದು ವಿಶ್ವ ಸಂಸ್ಥೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಆಗಿದ್ದು, ಇದು ಭಾರತೀಯರ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಸುಮಾರು 60 ಸಾವಿರ ಜನರಿಗೆ ಕಳೆದ ಒಂದು ವರ್ಷದಲ್ಲಿ ಉಚಿತವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಅಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೇ ರೀತಿ ಖಾಸಗಿ ವಲಯದಲ್ಲಿಯೂ ಸಹ 40000 ಜನರಿಗೆ ಚಿಕಿತ್ಸೆ ನೀಡಲಾಗಿದೆ. 118 ಕೋಟಿ ರೂ ಅನ್ನು ಮೈಸೂರು ಜಿಲ್ಲೆಯ ಆರೋಗ್ಯ ಚಿಕಿತ್ಸಾ ವೆಚ್ಚಗಳಿಗೆ ಸರ್ಕಾರ ಬರಿಸಿದ್ದು ಸುಮಾರು 5 ಕೋಟಿ ಸ್ಮಾರ್ಟ್ ಕಾರ್ಡುಗಳನ್ನು 100 ದಿನಗಳೊಳಗೆ ಜನರ ಮನೆಗಳಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. 85 ಲಕ್ಷ ಕಾರ್ಡುಗಳನ್ನು ಕಳೆದ 15 ದಿನಗಳಲ್ಲಿ ನೀಡಲಾಗಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಸಮರ್ಪಕವಾಗಿರುವಂತಹ ಒಂದು ಆರೋಗ್ಯ ವಿಮಾ ಯೋಜನೆಯಾಗಿದೆ ಎಂದು ತಿಳಿಸಿದರು.
ಅದೇ ರೀತಿ ಮೂಲಭೂತ ಸೌಕರ್ಯಗಳು ಸಹ ಮೈಸೂರು ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಹಾಗೆಯೇ 89 ಕೋಟಿ ರೂ.ಗಳನ್ನು ವಸತಿ ನಿಲಯಗಳಿಗೆ ನೀಡಲಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾಯುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ಮಧುಮೇಹ ರಕ್ತದೊತ್ತಡ ಕ್ಯಾನ್ಸರ್ ರೋಗಗಳಿಗೆ ತುತ್ತಾಗುತ್ತಿರುವವರನ್ನು ಹೆಚ್ಚಾಗಿ ಕಾಣಬಹುದು. ಕ್ಷಯ ನಿರ್ಮೂಲನೆಯನ್ನು ಮಾಡಬೇಕೆಂಬ ಉದ್ದೇಶ ವಿದ್ದು ಪ್ರಧಾನಮಂತ್ರಿಗಳು ಸಹ ವಿಶೇಷ ಅಭಿಯಾನವನ್ನು ಕೈಗೊಂಡಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಶಾಸಕರಾದ ಎಲ್.ನಾಗೇಂದ್ರ ಅವರು ಟ್ರಾಮಾ ಸೆಂಟರ್‌ಗೆ ಸಿಬ್ಬಂಧಿಗಳನ್ನು ಮತ್ತು ವೈದ್ಯರನ್ನು ನೀಡುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ಹಾಗೆಯೇ ನಗರದ ಸಂಶೋಧನಾ ಸಂಸ್ಥೆಯ ಕಟ್ಟಡ ಕಾಮಗಾರಿಗೆ ಸರ್ಕಾರ 32 ಕೋಟಿ ರೂ.ಗಳನ್ನು ನೀಡಿದ್ದು, ಬಾಲಕರ ವಸತಿ ನಿಲಯಕ್ಕೆ 35 ಕೋಟಿ ರೂ.ಗಳನ್ನು ನೀಡಲಾಗಿದೆ ಹಾಗೂ ಬಾಲಕಿಯರ ವಸತಿ ನಿಲಯಗಳಿಗೆ 42 ಕೋಟಿ ರೂಗಳನ್ನು ನೀಡಿದ್ದು, ಮೂರು ಕಟ್ಟಡಗಳು ಉದ್ಘಾಟನೆಯ ಹಂತದಲ್ಲಿವೆ ಎಂದು ತಿಳಿಸಿದರು.
ಹಾಗೆಯೇ ಕೆ.ಆರ್.ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ 89 ಕೋಟಿ 95 ಲಕ್ಷ ರೂಗಳನ್ನು ನೀಡಲಾಗಿದ್ದು, ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಡಾ.ರೂಪ, ನಗರಸಭೆ ಅಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಅನೇಕ ಗಣ್ಯರು, ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.