ಮನೆ ಸುದ್ದಿ ಜಾಲ ಪಂಚ ಗ್ಯಾರಂಟಿ ಯೋಜನೆಯಿಂದ ಜನರ ಜೀವನ ಮಟ್ಟ ಸುಧಾರಣೆ : ಚಿಕ್ಕಲಿಂಗಯ್ಯ

ಪಂಚ ಗ್ಯಾರಂಟಿ ಯೋಜನೆಯಿಂದ ಜನರ ಜೀವನ ಮಟ್ಟ ಸುಧಾರಣೆ : ಚಿಕ್ಕಲಿಂಗಯ್ಯ

0

ಮಂಡ್ಯ: ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿದ ನಂತರ ಜನರ ಜೀವನ ಮಟ್ಟ ಸುಧಾರಣೆ ಕಂಡಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಅವರು ಅಭಿಪ್ರಾಯಪಟ್ಟರು.

ಅವರು ಬುಧವಾರ ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಅರ್ಹ ಫಲಾನುಭವಿಗಳಗೆ ಯೋಜನೆ ತಲುಪುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಿ ಎಂದರು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ನೇರವಾಗಿ ಅರ್ಹರ ಮನೆ ಬಾಗಿಲಿಗೆ ತಲುಪುತ್ತಿದ್ದು, ಇದರ ಸದುಪಯೋಗ ಪಡೆದ ಜಿಲ್ಲೆಯ ಜನತೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿ ಮಾಹೆಯಿಂದ ಹಣದ ಬದಲು ಅಕ್ಕಿಯನ್ನು ನೀಡಲಾಗುತ್ತಿದ್ದು, ಮುಂದಿನ ಮಾಹೆಯಿಂದ ಅಕ್ಕಿಯೊಂದಿಗೆ ರಾಗಿ ನೀಡಲು ನಿರ್ಧರಿಸಲಾಗಿದೆ. ರಾಗಿಯ ಗುಣಮಟ್ಟವನ್ನು ಪರಿಶೀಲಿಸಿ ನಂತರ ವಿತರಿಸಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 2025 ರ ಮೇ ಮಾಹೆಯಲ್ಲಿ ಒಟ್ಟು 463565 ಫಲನುಭವಿಗಳಿಗೆ 51.40 ಕೋಟಿ ರೂ ಅನುದಾನ ನೀಡಲಾಗಿದೆ. ಫೆಬ್ರವರಿ ಹಾಗೂ ಮಾರ್ಚ್ ಮಾಹೆಯ ಹಣ ಪಾವತಿಗೆ ಬಾಕಿ ಇದ್ದು, ರಾಜ್ಯ ಸರ್ಕಾರಕ್ಕೆ ಬಾಕಿಯಿರುವ ಗೃಹಲಕ್ಷ್ಮಿ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಲಾಗುವುದು ಎಂದರು. ಶಕ್ತಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿಯಲ್ಲಿ 2025 ರ ಮಾರ್ಚ್ ಮಾಹೆಯಿಂದ ಮೇ ಮಾಹೆಯವರೆಗೆ ಒಟ್ಟು 1,95,60,641 ಟಿಕೇಟ್ ಪಡೆದು ಮಹಿಳೆಯರು ಸಂಚರಿಸಿದ್ದು, ಒಟ್ಟು 61.61 ಕೋಟಿ ರೂ ಗಳಲ್ಲಿ ಮೊತ್ತ ವೆಚ್ಚವಾಗಿರುತ್ತದೆ ಎಂದರು.

ಯುವನಿಧಿ ಯೋಜನೆಯ ಸೌಲಭ್ಯವು ನಿರುದ್ಯೋಗಿ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂದು ಪರಿಶೀಲಿಸಿ ಹಾಗೂ ಈಗಾಗಲೇ ಯುವನಿಧಿ ಯೋಜನೆಯಡಿ ನೋಂದಣಿಗೊAಡಿರುವವರಲ್ಲಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿದ್ದಲ್ಲಿ ವಿಲೇವಾರಿ ನಡೆಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿ. ಜಿಲ್ಲೆಯಲ್ಲಿ ಯುವನಿಧಿಯಡಿ ಒಟ್ಟು 5271 ಪಲಾನುಭಗಳಿದ್ದು, ಶೇಕಡಾವಾರು 80.39% ರಷ್ಟು ಫಲಾನುಭವಿಗಳಿಗೆ ಯುವನಿಧಿ ಹಣ ನೀಡಲಾಗಿದೆ ಎಂದರು. .

 ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಧನುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಹೆಚ್. ಕೆ ರುದ್ರಪ್ಪ, ಪ್ರಶಾಂತ್ ಬಾಬು, ವೀಣಾ ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.