ಮನೆ ಕ್ರೀಡೆ ಆರ್ ಸಿಬಿಯಲ್ಲಿ ರೀಸ್ ಟಾಪ್ಲೀ ಸ್ಥಾನ ತುಂಬಬಲ್ಲ ಐವರು ವೇಗಿಗಳು!

ಆರ್ ಸಿಬಿಯಲ್ಲಿ ರೀಸ್ ಟಾಪ್ಲೀ ಸ್ಥಾನ ತುಂಬಬಲ್ಲ ಐವರು ವೇಗಿಗಳು!

0

ಹೊಸದಿಲ್ಲಿ: ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲುವಿನ ಪ್ರಯತ್ನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಹಿಮ್ಮಡಿ ನೋವಿನಿಂದ ಯುವ ಬ್ಯಾಟರ್ ರಜತ್ ಪಾಟಿದಾರ್ ಟೂರ್ನಿಯಿಂದ ಹೊರ ನಡೆದ ಬೆನ್ನಲ್ಲೇ, ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್ ಎಡಗೈ ವೇಗಿ ರೀಸ್ ಟಾಪ್ಲೀ ಸೇವೆಯನ್ನು ಆರ್ ಸಿಬಿ ಕಳೆದುಕೊಂಡಿದೆ.

Join Our Whatsapp Group

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ 2 ಓವರ್ ಗಳಲ್ಲಿ ಉತ್ತಮ ಬೌಲಿಂಗ್ ಸಂಘಟಿಸಿ ಅಪಾಯಕಾರಿ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ವಿಕೆಟ್ ಪಡೆದಿದ್ದ ರೀಸ್ ಟಾಪ್ಲೀ, ಕ್ಷೇತ್ರ ರಕ್ಷಣೆಯ ವೇಳೆ ಭುಜದ ಮೂಳೆಗೆ ಪೆಟ್ಟು ಮಾಡಿಕೊಂಡು ಮೈದಾನ ತೊರೆದಿದ್ದರು. ತದ ನಂತರ ಅವರು ಮೈದಾನಕ್ಕೆ ಆಗಮಿಸಿರಲಿಲ್ಲ.

ಕೆಕೆಆರ್ ಪಂದ್ಯದ ವೇಳೆ ಇಂಗ್ಲೆಂಡ್ ವೇಗಿಯ ಗಾಯದ ಬಗ್ಗೆ ಮಾಹಿತಿ ನೀಡಿದ ಆರ್ ಸಿಬಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಟಾಪ್ಲೀ ಅವರ ಗಾಯದ ಸಮಸ್ಯೆ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಟೂರ್ನಿಯಿಂದ ಸಂಪೂರ್ಣ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದ ಆರ್ ಸಿಬಿ ಭಾರಿ ಹಿನ್ನಡೆಯಾಗಿದೆ.

ಆರ್ ಸಿಬಿ ತಂಡದಲ್ಲಿ ರೀಸ್ ಟಾಪ್ಲೀ ಸ್ಥಾನ ತುಂಬಬಲ್ಲ ಐವರು ಬೌಲರ್ ಗಳು

1. ದುಷ್ಮಾಂತ ಚಮೀರ: ಶ್ರೀಲಂಕಾದ ವೇಗದ ಬೌಲರ್ ದುಷ್ಮಾಂತ ಚಮೀರ 2021ರ ಐಪಿಎಲ್ ಟೂರ್ನಿಯಲ್ಲಿ ಬದಲಿ ಆಟಗಾರನಾಗಿ ಆರ್ ಸಿಬಿ ತಂಡ ಸೇರಿಕೊಂಡರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಹದಿನೈದನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ಪರ ಆಡಿದ್ದ 12 ಪಂದ್ಯಗಳಲ್ಲಿ 9 ವಿಕೆಟ್ ಕೆಡವಿ ಗಮನ ಸೆಳೆದಿದ್ದರು. ಇದರ ಹೊರತಾಗಿಯೂ ಅವರನ್ನು ಲಖನೌ ಫ್ರಾಂಚೈಸಿ ಮಿನಿ ಹರಾಜಿಗೆ ಬಿಡುಗಡೆ ಮಾಡಿತ್ತು. ಆದರೆ, ಮಿನಿ ಹರಾಜಿನಲ್ಲಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಆರ್ ಸಿಬಿ ರೀಸ್ ಟಾಪ್ಲೀ ಜಾಗಕ್ಕೆ ಇವರನ್ನು ಕರೆಯಬಹುದು.

2. ಮ್ಯಾಟ್ ಹೆನ್ರಿ: ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ , ಇಂಗ್ಲೆಂಡ್ ಎಡಗೈ ವೇಗಿಯ ಸ್ಥಾನವನ್ನು ಆರ್ ಸಿಬಿ ತಂಡದಲ್ಲಿ ತುಂಬಬಹುದು. ಹೆನ್ರಿ ಆರ್ ಸಿಬಿ ತಂಡ ಕೂಡಿಕೊಂಡರೆ ವೇಗಿಗಳಾದ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಅವರಿಗೆ ಉತ್ತಮ ಸಾಥ್ ನೀಡಬಹುದು.

3. ಜಾರ್ಜ್ ಗಾರ್ಟನ್: ಕಳೆದ ವರ್ಷ ಡಿಸೆಂಬರ್ 23ರಂದು ನಡೆದಿದ್ದ ಮಿನಿ ಹರಾಜಿನಲ್ಲಿ ಖರೀದಿ ಆಗದೆ ಉಳಿದಿರುವ ಇಂಗ್ಲೆಂಡ್ ಮತ್ತೊಬ್ಬ ಎಡಗೈ ವೇಗಿ ಜಾರ್ಜ್ ಗಾರ್ಟನ್ ಕೂಡ ರೀಸ್ ಟಾಪ್ಲೀ ಸ್ಥಾನ ತುಂಬಬಲ್ಲ ಬೌಲರ್ ಆಗಿದ್ದಾರೆ. 2021ರ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಈಗಾಗಲೇ 5 ಪಂದ್ಯಗಳನ್ನು ಆಡಿರುವ ಗಾರ್ಟನ್ 3 ವಿಕೆಟ್ ಕಬಳಿಸಿದ್ದಾರೆ. ಟಿ20 ಸ್ವರೂಪದಲ್ಲಿ 63 ಪಂದ್ಯಗಳಿಂದ ಅವರು 61 ವಿಕೆಟ್ ಕೆಡವಿ ಗಮನ ಸೆಳೆದಿದ್ದಾರೆ.

4. ದಿಲ್ಶಾನ್ ಮಧುಶಂಕ: ಟಿ20 ಸ್ವರೂಪದಲ್ಲಿ ಉತ್ತಮ ಬೌಲಿಂಗ್ ಸಂಯೋಜಿಸುತ್ತಿರುವ ಶ್ರೀಲಂಕಾ ವೇಗಿ ದಿಲ್ಶಾನ್ ಮಧುಶಂಕ 11 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ. 2022ರ ಸಾಲಿನ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ರಿಷಭ್ ಪಂತ್ , ದೀಪಕ್ ಹೂಡಾ ಅವರ ವಿಕೆಟ್ ಕೆಡವಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಟಾಪ್ಲೀ ಬದಲಿ ಆಟಗಾರನಾಗಿ ಮಧುಶಂಕ ಅವರಿಗೆ ಆರ್ಸಿಬಿ ಸ್ಥಾನ ಕಲ್ಪಿಸಿದರೂ ಅಚ್ಚರಿ ಇಲ್ಲ.

5. ಡೊಮಿನಿಕ್ ಡ್ರೇಕ್ಸ್: ವೆಸ್ಟ್ ಇಂಡೀಸ್ ಎಡಗೈ ವೇಗಿ ಡೊಮಿನಿಕ್ ಡ್ರೇಕ್ಸ್ ಅವರು ಆಡಿರುವ 10 ಟಿ20ಐ ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದಾರೆ. ಅಲ್ಲದೆ 43 ಟಿ20 ಪಂದ್ಯಗಳಲ್ಲಿ 43 ವಿಕೆಟ್ ಕಬಳಿಸಿದ್ದಾರೆ. 2021 ಹಾಗೂ 2022ನೇ ಸಾಲಿನಲ್ಲಿ ಕ್ರಮವಾಗಿ ಐಪಿಎಲ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡದಲ್ಲಿ ಗುರುತಿಸಿಕೊಂಡಿದ್ದರೂ ಒಂದೇ ಒಂದು ಪಂದ್ಯದಲ್ಲೂ ಪ್ಲೇಯಿಂಗ್ xIನಲ್ಲಿ ಆಡಲು ಡ್ರೇಕ್ಸ್ ಗೆ ಅವಕಾಶ ಸಿಕ್ಕಿರಲಿಲ್ಲ.

ಹಿಂದಿನ ಲೇಖನಬಿಜೆಪಿ ನಾಯಕಿಯ ಮಗನ ಮೇಲೆ ಕಚ್ಚಾ ಬಾಂಬ್ ಎಸೆದ ಅಪರಿಚಿತ ವ್ಯಕ್ತಿಗಳು: ಪ್ರಕರಣ ದಾಖಲು
ಮುಂದಿನ ಲೇಖನಕೋವಿಡ್‌–19 ಸೋಂಕು ನಿರ್ವಹಣೆಗೆ ಸಜ್ಜಾಗಿರಿ: ರಾಜ್ಯಕ್ಕೆ ಕೇಂದ್ರದ ಸಲಹೆ