ಬೆಂಗಳೂರು: ಮಾಲೀಕರ ಬಳಿ ಇದ್ದ 1 ಕೋಟಿ ರೂ. ದೋಚಲು ಕಾರು ಚಾಲಕನೊಬ್ಬ ರೌಡಿಶೀಟರ್ ಜತೆ ಸೇರಿ ಅಪಹರಣದ ನಾಟಕವಾಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಾರು ಚಾಲಕ ಹೇಮಂತ್ ಕುಮಾರ್ (34), ಮಲ್ಲೇಶ್ವರ ಠಾಣೆ ರೌಡಿಶೀಟರ್ ಶ್ರೀನಿವಾಸ್ (40), ಮೋಹನ್(40), ಸಹಚರರಾದ ತೇಜಸ್ (25), ಕುಲದೀಪ್ (23) ಬಂಧಿತರು. ಮತ್ತೂಬ್ಬ ಆರೋಪಿ ಕಿರಣ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಮಹಾಲಕ್ಷ್ಮೀ ಲೇಔಟ್‌ನ ಮೈಕೋಲೇಔಟ್ ನಿವಾಸಿ, ದೂರುದಾರರಾದ ಲಕ್ಷ್ಮೀ ಸೀರಿಯಲ್ ಪ್ರೊಡಕ್ಷನ್ ಹೌಸ್ ವ್ಯವಹಾರ ನಡೆಸುತ್ತಿದ್ದು, ಅವರ ಸಹಾಯಕ ನಾಗಿ ನಾಗೇಶ್ ಮತ್ತು ಕಾರು ಚಾಲಕನಾಗಿ ಹೇಮಂತ್ ಕೆಲಸ ಮಾಡುತ್ತಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ದಯಾನಂದ್, ತಲೆಮರೆಸಿ ಕೊಂಡಿರುವ ಕಿರಣ್ ಕೂಡ ಈ ಹಿಂದೆ ದೂರುದಾರ ಬಳಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಈ ಮಧ್ಯೆ ಲಕ್ಷ್ಮೀ ಅವರಿಗೆ ಹೊಸ ಮನೆ ನಿರ್ಮಿಸಲು ಬ್ಯಾಂಕ್‌ನಿಂದ 1 ಕೋಟಿ ರೂ. ಸಾಲ ಮಂಜೂರಾಗಿತ್ತು. ಈ ವಿಚಾರ ತಿಳಿದ ಹೇಮಂತ್, ಕಿರಣ್ ಗೆ ಮಾಹಿತಿ ನೀಡಿದ್ದಾನೆ. ಬಳಿಕ ಇಬ್ಬರು, ರೌಡಿ ಶೀಟರ್ ಶ್ರೀನಿವಾಸ್ ಗೆ ಮಾಹಿತಿ ನೀಡಿ ಅಪಹರಣದ ಕಥೆ ಸೃಷ್ಟಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಆರೋಪಿ ಹೇಮಂತ್, ಸಹಾಯಕ ನಾಗೇಶ್ ಜತೆ ಕಾರ್ಯನಿಮಿತ್ತ ಮೈಸೂರಿಗೆ ಹೋಗುವುದಾಗಿ ಫೆ.12ರಂದು ಬೆಳಗ್ಗೆ 8.30ರ ಸುಮಾರಿಗೆ ಮನೆಯಿಂದ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ಅದೇ ದಿನ ರಾತ್ರಿ ಸುಮಾರು 9 ಗಂಟೆಗೆ ಹೇಮಂತ್, ಲಕ್ಷ್ಮೀಗೆ ಕರೆ ಮಾಡಿ ಮಾತನಾಡಿದ್ದಾನೆ. ಫೆ.14ರಂದು ಮಧ್ಯಾಹ್ನ ಸುಮಾರು 1.50ರ ಸುಮಾರಿಗೆ ಹೇಮಂತ್ ಲಕ್ಷ್ಮೀಗೆ ಕರೆ ಮಾಡಿ ಅಳುತ್ತಾ, “ನಮ್ಮಿಬ್ಬರನ್ನು ಯಾರೋ ಅಪಹರಿಸಿದ್ದು, ಕಾರಿನಲ್ಲಿ ಸುತ್ತಾಡಿಸುತ್ತಿದ್ದಾರೆ’ ಎಂದು ಸುಳ್ಳು ಹೇಳಿದ್ದಾನೆ.
ಕೆಲ ಹೊತ್ತಿನ ಬಳಿಕ ಅಪರಿಚಿತ ಲಕ್ಷ್ಮೀಗೆ ಕರೆಮಾಡಿ, “ನಿಮ್ಮ ಹುಡುಗರು ಬೇಕೆಂದರೆ 1 ಕೋಟಿ ರೂ. ನೀಡಬೇಕು, ಇಲ್ಲವಾದರೆ ಅವರಿಬ್ಬರನ್ನು ಕೊಲ್ಲುತ್ತೇನೆ’ ಎಂದು ಬದರಿಸಿದ್ದಾನೆ. ಅದರಿಂದ ಗಾಬರಿಯಾದ ಲಕ್ಷ್ಮೀಯ ಕೂಡಲೇ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಟೋಲ್ ಗಳಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಸಹಾಯಕ ನಾಗೇಶ್‌ಗೆ ಅಪಹರಣದ ಮಾಹಿತಿ ಇಲ್ಲ ಎಂಬುದು ಗೊತ್ತಾಗಿದೆ. ಆತನ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಉತ್ತರ ವಿಭಾಗದ ಡಿಸಿಪಿ ಸೈದುಲ್ ಅಡಾವತ್ ಮಾರ್ಗದರ್ಶನದಲ್ಲಿ, ಎಸಿಪಿ ಕೃಷ್ಣಮೂರ್ತಿ, ಪಿಐ ಮಂಜು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.